ಭಾರತೀಯ ಕ್ರಿಕೆಟ್ ಕ್ಷೇತ್ರಕ್ಕೆ ಹೊಸ ಮೆರುಗನ್ನು ತಂದುಕೊಟ್ಟ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ತಂಪು ಪಾನೀಯ ಕಂಪೆನಿಯಾದ ಕೋಕ್‌ನೊಂದಿಗೆ 3 ವರ್ಷಗಳ ಅವಧಿಯ 20 ಕೋಟಿ ರೂಪಾಯಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಸಚಿನ್ ತೆಂಡೂಲ್ಕರ್ ಕಂಪೆನಿಯ ರಾಯಭಾರಿಯಾಗಿ ಮುಂದುವರಿಯಲಿದ್ದು,ಕಂಪೆನಿಯ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕೋಕ್ ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸಚಿನ್, 2008ರ ಅವಧಿಯವರೆಗೆ ಪೆಪ್ಸಿಕೊ ಕಂಪೆನಿಯ ರಾಯಭಾರಿ ಸ್ಥಾನವನ್ನು ಅಲಂಕರಿಸಿದ್ದರು. ಆದರೆ, ಪೆಪ್ಸಿ ಜಾಹೀರಾತಿಗೆ ಯುವ ಕ್ರೀಡಾಪಟುವನ್ನು ಬಳಸಿಕೊಳ್ಳುವ ಹಿನ್ನೆಲೆಯಲ್ಲಿ, ಸಚಿನ್ ಅವರನ್ನು ಕೈ ಬಿಟ್ಟು ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಇತರ ಯುವ ಕ್ರಿಕೆಟಿಗರನ್ನು ಸೆಳೆದುಕೊಂಡಿತ್ತು.
ವರ್ಲ್ಡ್ ಸ್ಪೋರ್ಟ್ಸ್ ಗ್ರೂಪ್‌ನ(ದಕ್ಷಿಣ ಏಷ್ಯಾ) ಉಪಾಧ್ಯಕ್ಷರಾದ ಹರೀಷ್ ಕೃಷ್ಣಮಾಚಾರ್ ಮಾತನಾಡಿ, ಸಚಿನ್ ಅವರನ್ನು ಕಾರ್ಪೋರೇಟ್ ಮತ್ತು ಇತರ ಸಿಎಸ್‌ಆರ್ ಜಾಹೀರಾತುಗಳಲ್ಲಿ ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೋಕಾ ಕೋಲಾ ಕಂಪೆನಿಯ ನಿರ್ದೇಶಕ ವಾಸೀಂ ಬಾಸಿರ್ ಮಾತನಾಡಿ, ಸಚಿನ್ ತೆಂಡೂಲ್ಕರ್ ನಂಬಿಕೆ, ವಿಶ್ವಾಸಾರ್ಹತೆ, ಬದ್ಧತೆ ಮತ್ತು ಸಹನ ಶೀಲತೆಯ ಸಂಕೇತವಾಗಿರುವುದರಿಂದ ಕಂಪೆನಿಯ ಜಾಹೀರಾತಿಗೆ ಸೂಕ್ತ ರಾಯಭಾರಿಯಾಗಿದ್ದಾರೆ ಎಂದು ವಿವರಣೆ ನೀಡಿದ್ದಾರೆ.