ಗ್ರಾಮೀಣ ಪ್ರದೇಶದಲ್ಲಿ ಮೊಬೈಲ್ ಮಾರುಕಟ್ಟೆಗೆ ಹೆಚ್ಚು ಅವಕಾಶ
ನವದೆಹಲಿ, ಮಂಗಳವಾರ, 25 ಜನವರಿ 2011( 16:14 IST )
ಸರಕಾರವು ತನ್ನ ವಿತ್ತೀಯ ಯೋಜನೆಗಳಲ್ಲಿ ಸೆಲ್ ಫೋನ್‌ಗಳನ್ನು ಅತ್ಯಂತ ಪ್ರಮುಖ ಸಾಧನವಾಗಿ ಮಾಡಿಕೊಂಡಿರುವುದರಿಂದಾಗಿ, ಮುಂದಿನ ನಾಲ್ಕು ವರ್ಷಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಫೋನ್ ಸೇವೆಗಳು ವೃದ್ಧಿಸುವ ನಿರೀಕ್ಷೆ ಇದೆ ಎಂದು ಜಾಗತಿಕ ಸಮಾಲೋಚನಾ ಸಂಸ್ಥೆ 'ಡೆಲಾಯ್ಟ್' ತಿಳಿಸಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಸೇವೆಗಳು ಇನ್ನೂ ಸಂಪೂರ್ಣವಾಗಿ ಆವರಿಸಿಕೊಂಡಿಲ್ಲ. ಹೀಗಾಗಿ ಆ ಕ್ಷೇತ್ರದಲ್ಲಿ ಸಾಕಷ್ಟು ಔದ್ಯಮಿಕ ಅವಕಾಶಗಳಿವೆ ಎಂದಿದೆ ಡೆಲಾಯ್ಟ್.
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಮಾಜದ ಎಲ್ಲಾ ಸ್ತರದ ಜನರ ಸರ್ವತೋಮುಖ ಬೆಳವಣಿಗೆಗೆ ಸಂಬಂಧಿತ ಮಾಹಿತಿ ಮತ್ತು ಸೇವೆಗಳನ್ನು ಒದಗಿಸಲು ಮೊಬೈಲ್ ಫೋನ್‌ಗಳನ್ನು ಹೇಗೆಲ್ಲಾ ಬಳಸಬಹುದು ಎಂಬುದರ ಮೇಲೆ ಈ ವರದಿಯು ಬೆಳಕು ಚೆಲ್ಲಿದೆ.
ಮುಂದಿನ ಮೊಬೈಲ್ ಬೆಳವಣಿಗೆಯ ಸರದಿ ಸಣ್ಣ ನಗರ ಮತ್ತು ಗ್ರಾಮೀಣ ಪ್ರದೇಶಗಳದ್ದು. ಇಂದು ನಗರ ಪ್ರದೇಶಗಳ ಮೊಬೈಲ್ ಬಳಕೆ ಶೇ. 100 ರಷ್ಟಿದ್ದು, ಗ್ರಾಮೀಣ ಪ್ರದೇಶದಲ್ಲಿ ಕೇವಲ ಶೇ. 23 ರಷ್ಟಿದೆ.
ಗ್ರಾಮೀಣ ವಲಯದ ಸೇವೆಗಳಲ್ಲಿ, ಕೃಷಿ ಉತ್ಪನ್ನಗಳ ಖರೀದಿ ಮತ್ತು ಮಾರಾಟ ಹಾಗೂ ಬೆಂಬಲ, ಕೃಷಿಕರು ಯಾವ ರೀತಿಯಲ್ಲಿ ಹೆಚ್ಚು ಬೆಳೆ ತೆಗೆಯಬಹುದು ಎಂಬುದರ ಕುರಿತಾದ ಶಿಕ್ಷಣ, ಕುಗ್ರಾಮಗಳಿಗೂ ಆರೋಗ್ಯ ಮತ್ತು ಶಿಕ್ಷಣ ಸೇವೆಗಳನ್ನು ತಲುಪಿಸುವುದು ಮುಂತಾದವು ಒಳಗೊಂಡಿರುತ್ತವೆ.
2009 ಮಾರ್ಚ್‌ನಿಂದ 2010 ಮಾರ್ಚ್‌ವರೆಗೆ ದೇಶದಲ್ಲಿ ಒಟ್ಟಾರೆ ಶೇ.35 ರಷ್ಟು ಮೊಬೈಲ್ ಬಳಕೆ ಏರಿಕೆಯಾಗಿದ್ದು, ಅತೀ ಕಡಿಮೆ ವೆಚ್ಚದ ಮೊಬೈಲ್ ಬಳಕೆದಾರರಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಗತಿ ಇನ್ನೂ ಹೆಚ್ಚಿದೆ.
ಭಾರತದ ಶೇ. 60 ರಷ್ಟು ಜನಸಂಖ್ಯೆಯೂ ಗ್ರಾಮೀಣ ಪ್ರದೇಶದಲ್ಲಿದ್ದು, ಅದರಲ್ಲಿ ಸುಮಾರು ಶೇ. 76 ರಷ್ಟು ಜನರು ಕಡುಬಡತನದಲ್ಲಿದ್ದಾರೆ. ಹೀಗಾಗಿ ಆರ್ಥಿಕ ಅಸಮತೋಲನವು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿದೆ.
ಮೂಲಸೌಕರ್ಯ, ಮಾನವ ಸಂಪನ್ಮೂಲ ಮತ್ತು ಕಾರ್ಯಾಚರಣಾ ಅಡಚಣೆಗಳಿಂದಾಗಿ ಬ್ಯಾಂಕ್‌ಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ವಿಸ್ತರಿಸಲು ಸಾಧ್ಯವಾಗುತ್ತಿಲ್ಲ.