ಏರ್ ಇಂಡಿಯಾ ಆರ್ಥಿಕವಾಗಿ ತೀರಾ ಕೃಶಗೊಂಡಿರಬಹುದು. ಆದರೆ ಹಿರಿಯ ನಾಗರಿಕರ ಯೋಗ-ಕ್ಷೇಮವನ್ನು ಹೇಗೆ ನೋಡಿಕೊಳ್ಳಬೇಕೆನ್ನುವುದು ಇತರ ವಿಮಾನ ಯಾನ ಸಂಸ್ಥೆಗಳಿಗಿಂತ ಹೆಚ್ಚು ಇದಕ್ಕೆ ತಿಳಿದಿದೆ. ಆ ನಿಟ್ಟಿನಲ್ಲಿ ಪ್ರಸಕ್ತ ಅದು ತೆಗೆದುಕೊಂಡಿರುವ ಪ್ರಮುಖ ನಿರ್ಧಾರವೆಂದರೆ ವಯೋವೃದ್ಧರಿಗೆ ಶೇ.50ರಷ್ಟು ರಿಯಾಯಿತಿ ನೀಡುವುದು.
ಇನ್ನು ಮುಂದೆ 63 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಹಿರಿಯ ನಾಗರಿಕರು ಮೂಲ ಟಿಕೆಟ್ ದರದಲ್ಲಿ ಶೇ.50ರ ರಿಯಾಯಿತಿ ಪಡೆಯಲಿದ್ದಾರೆ. ಈ ಹಿಂದೆ ಮಹಿಳೆಯರಿಗೆ ಮಾತ್ರ ಇದು ಲಭ್ಯವಿತ್ತು. 63 ವರ್ಷಕ್ಕಿಂತ ಹೆಚ್ಚಿನ ವೃದ್ಧೆಯರಿಗೆ ಶೇ.50ರ ರಿಯಾಯಿತಿ ಇತ್ತು. ಇದೇ ರಿಯಾಯಿತಿಯನ್ನು ಪುರುಷರು ಪಡೆಯಬೇಕಿದ್ದರೆ, 65 ವರ್ಷ ಆಗಬೇಕಿತ್ತು. ಆ ವಿಚಾರದಲ್ಲೀಗ ಸಮಾನತೆ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ.
ಹಿರಿಯ ನಾಗರಿಕರಿಗೆ ಇದೇ ರೀತಿಯ ಸೇವೆಯನ್ನು ನೀಡುತ್ತಿರುವ ಇನ್ನೆರಡು ಪೂರ್ಣ ಪ್ರಮಾಣದ ವಿಮಾನ ಯಾನ ಸಂಸ್ಥೆಗಳೆದರೆ ಜೆಟ್ ಮತ್ತು ಕಿಂಗ್‌ಫಿಶರ್. ಇವೆರಡೂ ಸಂಸ್ಥೆಗಳು 65 ವರ್ಷಕ್ಕಿಂತ ಮಿಗಿಲಾದವರಿಗೆ ರಿಯಾಯಿತಿ ದರದ ಆಹ್ವಾನ ನೀಡುತ್ತಿವೆ. ಅಗ್ಗ ಟಿಕೆಟ್ ದರದ ಇಂಡಿಗೋ ಮತ್ತು ಸ್ಪೈಸ್‌ಜೆಟ್‌ಗಳು ಇಂತಹ ಯಾವುದೇ ಪ್ಯಾಕೇಜ್ ಹೊಂದಿಲ್ಲ.
ಕಳೆದ ಶನಿವಾರದಿಂದಲೇ ಜಾರಿಗೆ ಬರುವಂತೆ ಎಲ್ಲಾ 63ಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷ ಮತ್ತು ಮಹಿಳಾ ಪ್ರಯಾಣಿಕರಿಗೆ ಸಮಾನ ರಿಯಾಯಿತಿ ದರಗಳನ್ನು ಪ್ರಕಟಿಸಲಾಗಿದೆ. 63 ದಾಟಿದ ಯಾವುದೇ ವ್ಯಕ್ತಿ ಈಗ ರಿಯಾಯಿತಿ ದರದ ಪ್ರಯಾಣಕ್ಕೆ ಅರ್ಹರಾಗಿದ್ದಾರೆ. ಸಾಮಾನ್ಯ ಇಕಾನಮಿ ದರ್ಜೆಯ ಮೂಲ ಟಿಕೆಟ್ ದರದ ಮೇಲೆ ಶೇ.50ರ ರಿಯಾಯಿತಿಯನ್ನು ಅವರಿಗೆ ನೀಡಲಾಗುತ್ತದೆ ಎಂದು ಏರ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.