ಕೇಂದ್ರದ ಟೆಲಿಕಾಂ ಖಾತೆಯ ಮಾಜಿ ಸಚಿವ ಎ.ರಾಜಾ.2ಜಿ ತರಂಗಾಂತರಗಳ ಹಂಚಿಕೆಯಲ್ಲಿ 40,000-50,000 ಕೋಟಿ ರೂಪಾಯಿಗಳನ್ನು ಅಪಮೌಲ್ಯ ಮಾಡಿದ್ದರಿಂದ, 3,000 ಕೋಟಿ ರೂಪಾಯಿ ಲಂಚ ಪಡೆದಿರುವ ಸಾಧ್ಯತೆಗಳಿವೆ ಎಂದು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.
ಮಾಜಿ ಸಚಿವ ಎ.ರಾಜಾ, ತರಂಗಾಂತರಗಳ ಹಂಚಿಕೆ ದಿನಾಂಕವನ್ನು 2007ಅಕ್ಟೋಬರ್ 21ರ ಬದಲಿಗೆ 2007ಸೆಪ್ಟೆಂಬರ್ 25ಕ್ಕೆ ಹಿಂದೂಡಿ ಕೆಲ ಕಂಪೆನಿಗಳಿಗೆ ಲಾಭವಾಗಿಸಿದ್ದರಿಂದ, ಕಾನೂನುಬಾಹಿರವಾಗಿ 3,000 ಕೋಟಿ ರೂಪಾಯಿ ಲಂಚ ಪಡೆದಿರಬಹುದು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಆರಂಭಿಕ ತನಿಖೆಯಿಂದ ರಾಜಾ 3000 ಕೋಟಿ ರೂಪಾಯಿ ಲಂಚ ಸ್ವೀಕಾರ ಮತ್ತು ಸರಕಾರದ ಬೊಕ್ಕಸಕ್ಕೆ 40,000-50,000 ಕೋಟಿ ರೂಪಾಯಿ ನಷ್ಟ ಉಂಟು ಮಾಡಿರುವ ಬಗ್ಗೆ ವರದಿಗಳು ಲಭ್ಯವಾಗಿವೆ. ತನಿಖಾ ತಂಡಗಳು ವಿಚಾರಣೆಯನ್ನು ಮುಂದುವರಿಸಿವೆ.
ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಅಧಿಕಾರಿಗಳ ವರದಿಗಳ ಪ್ರಕಾರ, 2ಜಿ ಲೈಸೆನ್ಸ್ ಪಡೆದ ಕೆಲ ಕಂಪೆನಿಗಳು ತರಂಗಾಂತರಗಳ ಹಂಚಿಕೆ ಮುನ್ನವೇ ಪರವಾನಿಗಿ ಶುಲ್ಕವನ್ನು ಪಾವತಿಸುವಂತೆ ಸೂಚನೆ ಪಡೆದಿದ್ದವು. ಸ್ವಾನ್, ಯುನಿಟೆಕ್, ವಿಡಿಯೋಕಾನ್ ಎಸ್-ಟೆಲಿ ಮತ್ತು ಏರ್‌ಸೆಲ್ ಕಂಪೆನಿಗಳಿಗೆ ಮಾಜಿ ಸಚಿವ ಎ.ರಾಜಾ ನೆರವಾಗಿರಬಹುದು ಎಂದು ಮೂಲಗಳು ತಿಳಿಸಿವೆ.