ಶೀಘ್ರದಲ್ಲಿ ಆಹಾರ ಹಣದುಬ್ಬರ ದರ ಒಂದಂಕಿಗೆ ಕುಸಿತ:ಮುಖರ್ಜಿ
ನವದೆಹಲಿ, ಶುಕ್ರವಾರ, 18 ಫೆಬ್ರವರಿ 2011( 09:38 IST )
ಈರುಳ್ಳಿ ಮತ್ತು ತರಕಾರಿ ದರಗಳು ಸೇರಿದಂತೆ ಅಗತ್ಯ ವಸ್ತುಗಳ ದರಗಳು ಫೆಬ್ರವರಿ ಮೊದಲ ವಾರದಲ್ಲಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಮಾರ್ಚ್ ಅಂತ್ಯಕ್ಕೆ ಆಹಾರ ಹಣದುಬ್ಬರ ಒಂದಂಕಿಗೆ ಇಳಿಕೆಯಾಗುವ ನಿರೀಕ್ಷೆಗಳಿವೆ ಎಂದು ಕೇಂದ್ರ ವಿತ್ತ ಖಾತೆ ಸಚಿವ ಪ್ರಣಬ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಂದಿನ ತಿಂಗಳ ಅವಧಿಯಲ್ಲಿ ಆಹಾರ ಹಣದುಬ್ಬರ ದರ ಏಕಂಕಿಗೆ ಇಳಿಕೆಯಾಗಲಿದೆ ಎದು ಮುಖರ್ಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈರುಳ್ಳಿ ಮತ್ತು ತರಕಾರಿ ದರಗಳ ಏರಿಕೆಯಿಂದಾಗಿ ಆಹಾರ ಹಣದುಬ್ಬರ ದರ ಕಳೆದ ಎರಡು ತಿಂಗಳುಗಳಿಂದ ಏರಿಕೆಯಾಗಿತ್ತು. ಡಿಸೆಂಬರ್ 25ಕ್ಕೆ ವಾರಂತ್ಯಗೊಂಡಂತೆ ಆಹಾರ ಹಣದುಬ್ಬರ ದರ ಗರಿಷ್ಠ ಶೇ.18ಕ್ಕೆ ಏರಿಕೆ ಕಂಡಿತ್ತು.
ಇದೀಗ, ಆಹಾರ ಹಣದುಬ್ಬರ ದರ ಕುಸಿಯುತ್ತಿದೆ.ಸಗಟು ಸೂಚ್ಯಂಕ ದರ ಕೂಡಾ ಶೇ.2ರಷ್ಟು ಕುಸಿತ ಕಂಡಿರುವುದು ಶುಭ ಸಂಕೇತವಾಗಿದೆ ಎಂದು ಮುಖರ್ಜಿ ಹೇಳಿದ್ದಾರೆ.
ಫೆಬ್ರವರಿ 5ಕ್ಕೆ ವಾರಂತ್ಯಗೊಂಡಂತೆ, ಆಹಾರ ಹಣದುಬ್ಬರ ದರ ಒಂಬತ್ತು ವಾರಗಳ ಗರಿಷ್ಠ ಇಳಿಕೆ ಕಂಡು ಶೇ.13.07ರಿಂದ ಶೇ.11.05ಕ್ಕೆ ಕುಸಿತ ಕಂಡಿದೆ.