2ಜಿ ತರಂಗಾಂತರ ಹಂಚಿಕೆ ಹಗರಣ ಕುರಿತಂತೆ ತನಿಖೆ ಮುಂದುವರಿಸಿರುವ ಸಿಬಿಐ, ಡಿಎಂಕೆ ಮಾಲೀಕತ್ವದ ಕಲೈಂಜ್ಞರ್ ಟಿವಿ ಚಾನೆಲ್ ಕಚೇರಿಯ ಮೇಲೆ ದಾಳಿ ನಡೆಸಿದೆ.
ವರದಿಗಳ ಪ್ರಕಾರ, ಸಿಬಿಐ ಅಧಿಕಾರಿಗಳ ತಂಡ ಹಾಗೂ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಚಾನೆಲ್ ಕಚೇರಿಯ ಮೇಲೆ ದಾಳಿ ನಡೆಸಿ, ಡಿಬಿ ರಿಯಲ್ಟಿ ಗ್ರೂಪ್ ಮುಖ್ಯಸ್ಥ ಶಾಹೀದ್ ಉಸ್ಮಾನ್ ಬಲ್ವಾ, ಚಾನೆಲ್‌ಗೆ 214 ಕೋಟಿ ರೂಪಾಯಿಗಳ ಸಾಲವನ್ನು ನೀಡಿರುವ ಬಗ್ಗೆ ಸಾಕ್ಷಾಧಾರಗಳನ್ನು ಸಂಗ್ರಹಿಸುವಲ್ಲಿ ಪ್ರಯತ್ನಿಸುತ್ತಿದ್ದಾರೆ. ಚಾನೆಲ್‌ನ ವ್ಯವಸ್ಥಾಪಕ ನಿರ್ದೇಶಕ ಶರದ್ ಕುಮಾರ್ ಅವರ ನಿವಾಸದ ಮೇಲೆ ಕೂಡಾ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
2ಜಿ ತರಂಗಾಂತರಗಳ ಹಂಚಿಕೆ ಅವ್ಯವಹಾರದಲ್ಲಿ ಸ್ವಾನ್ ಟೆಲಿಕಾಂ ಮುಖ್ಯಸ್ಥ ಶಾಹೀದ್ ಬಲ್ವಾ ಮತ್ತು ಕಲೈಂಜ್ಞರ್ ಚಾನೆಲ್ ಮಧ್ಯೆ ಸಂಪರ್ಕವಿದೆ ಎಂದು ಸಿಬಿಐ ಆರೋಪಿಸಿದ ಒಂದು ದಿನದ ನಂತರ, ಕಲೈಜ್ಞಾರ್ ಟಿವಿ ಚಾನೆಲ್ ಅಡಳಿತ ವರ್ಗ ಸಿಬಿಐ ಆರೋಪಗಳನ್ನು ತಳ್ಳಿಹಾಕಿದೆ.
ಚಾನೆಲ್‌ನ ವ್ಯವಸ್ಥಾಪಕ ನಿರ್ದೇಶಕ ಶರದ್ ಕುಮಾರ್ ಮಾತನಾಡಿ, ಸಿನಿಯುಗ್ ಫಿಲ್ಮ್ಸ್‌ನೊಂದಿಗಿನ ಹಣಕಾಸಿನ ವಹಿವಾಟಿನ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಹಣದ ವಹಿವಾಟಿನಲ್ಲಿ ಯಾವುದೇ ರೀತಿಯ ಅವ್ಯವಹಾರವಾಗಿಲ್ಲ ಎಂದು ತಿಳಿಸಿದ್ದಾರೆ.