ದೇಶದ ಖಾಸಗಿ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಭಾರ್ತಿ ಏರ್‌ಟೆಲ್, ದೆಹಲಿ ಮತ್ತು ಎನ್‌ಸಿಆರ್ ನಗರಗಳಲ್ಲಿ 3ಜಿ ಸೇವೆಯನ್ನು ವಿಸ್ತರಿಸಿದ್ದು, 2000 ರೂಪಾಯಿಗಳಿಗೆ ಅನಿಯಮಿತ ಡಟಾ ಬಳಕೆ ಸೇವೆಯನ್ನು ನೀಡುತ್ತಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
3ಜಿ ಸೇವೆಯಿಂದಾಗಿ ಟಿವಿ ಚಾನೆಲ್‌ಗಳು, ವಿಡಿಯೋ ಕಾಲಿಂಗ್ ಮತ್ತು ಹೈ-ಸ್ಪೀಡ್ ಇಂಟರ್‌ನೆಟ್ ಸೌಲಭ್ಯವನ್ನು ಪಡೆಯಬಹುದಾಗಿದೆ.
ದೆಹಲಿ ಸೇರಿದಂತೆ ಗುರ್ಗಾಂವ್ ಫರಿದಾಬಾದ್ ಮತ್ತು ನೋಯಿಡಾ ನಗರಗಳಲ್ಲಿ 3ಜಿ ಸೇವೆ ಆರಂಭವಾಗಿದ್ದು, ಫ್ಲಿಕ್‌ರ್, ಟ್ವಿಟ್ಟರ್, ಫೇಸ್‌ಬುಕ್ ಮತ್ತು ಇತರ ಸೋಶಿಯಲ್ ನೆಟ್ವರ್ಕ್ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ಭಾರ್ತಿ ಏರ್‌ಟೆಲ್ ಅಧ್ಯಕ್ಷ(ಮೊಬೈಲ್ ಸೇವೆ) ಅತುಲ್ ಬಿಂದಾಲ್ ತಿಳಿಸಿದ್ದಾರೆ.
ಏರ್‌ಟೆಲ್ 3ಜಿ ಸೇವೆಯನ್ನು ಈಗಾಗಲೇ ಬೆಂಗಳೂರು, ಚೆನ್ನೈ, ಕೊಯಿಮುತ್ತೂರ್, ಮೈಸೂರ್, ಮಣಿಪಾಲ್, ಉಡುಪಿ ಮತ್ತು ಜೈಪುರ್ ನಗರಗಳಲ್ಲಿ ಆರಂಭಿಸಲಾಗಿದೆ. ಮಾರ್ಚ್ ವೇಳೆಗೆ ಎಲ್ಲಾ ವಲಯಗಳಲ್ಲಿ 3ಜಿ ಸೇವೆಯನ್ನು ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
ದೇಶದ 40-45 ನಗರಗಳಲ್ಲಿ ಒಂದು ತಿಂಗಳೊಳಗಾಗಿ 3ಜಿ ಸೇವೆಯನ್ನು ನೀಡಲಾಗುವುದು. ಮುಂದಿನ ವರ್ಷದ ಮಾರ್ಚ್ ವೇಳೆಗೆ 1000 ನಗರಗಳಲ್ಲಿ 3ಜಿ ಸೇವೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಬಿಂದಾಲ್ ವಿವರಣೆ ನೀಡಿದ್ದಾರೆ.