ಸೋಮವಾರದ ಪ್ರಾರಂಭಿಕ ವಹಿವಾಟಿನಲ್ಲಿ ಶೇರು ಮಾರುಕಟ್ಟೆ ಚುರುಕುಗೊಂಡಿದ್ದರ ಪರಿಣಾಮವಾಗಿ ವಿದೇಶಿ ವಿನಿಮಯ ವಹಿವಾಟಿನಲ್ಲಿ ರೂಪಾಯಿ ಮೌಲ್ಯದಲ್ಲಿ ಏಳು ಪೈಸೆಗಳಷ್ಟು ಹೆಚ್ಚಳವಾಗಿದೆ. ತೈಲ ಕಂಪನಿಗಳಿಂದ ಸತತವಾಗಿ ಡಾಲರ್‌ಗೆ ಬೇಡಿಕೆ ಇದ್ದರೂ ಕೂಡ, ಬಂಡವಾಳ ಮಾರುಕಟ್ಟೆಗೆ ನಿರಂತರವಾಗಿ ಡಾಲರ್ ಒಳಹರಿವು ಇದ್ದುದರಿಂದ ರೂಪಾಯಿ ತನ್ನ ಮೌಲ್ಯ ಕಳೆದುಕೊಳ್ಳದೇ ಹೆಚ್ಚಳಗೊಂಡಿತು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರತಿ ಡಾಲರಿಗೆ 39.36/38 ದಿಂದ ವಿದೇಶಿ ವಿನಿಮಯ ಪ್ರಾರಂಭಿಸಿದ ರೂಪಾಯಿಯು ಪ್ರಾರಂಭಿಕ ಶೇರು ವ್ಯವಹಾರ ಅಂತ್ಯಗೊಂಡ ನಂತರ 39.38/39ರೂಗಳಿಗೆ ಡಾಲರ್ ಎದುರು ತನ್ನ ಮೌಲ್ಯ ಸ್ಥಿರಗೊಳಿಸಿತು. ರೂಪಾಯಿ ಮೌಲ್ಯದಲ್ಲಿ ಏರಿಕೆಯಾಗಲು ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಕುಸಿತಕ್ಕೆ ಒಳಗಾಗಿದ್ದು ಕೂಡ ಕಾರಣ ಎನ್ನಲಾಗಿದೆ.
ಕಚ್ಚಾ ಇಂಧನ ಬೆಲೆ, ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಪ್ರತಿಬ್ಯಾರೆಲ್ ಬೆಲೆ 93 ಡಾಲರ್ ತಲುಪಿದೆ. ಆದರೂ ಕೂಡ ತೈಲ ಕಂಪನಿಗಳಿಗೆ ರೂಪಾಯಿ ಮೌಲ್ಯದಲ್ಲಿನ ಏರಿಕೆ ಲಾಭವನ್ನು ತಂದಿದ್ದು. ಈ ಮಾಸಾಂತ್ಯದಲ್ಲಿ ರೂಪಾಯಿಯ ಮೌಲ್ಯದಲ್ಲಿ ಆಗಿರುವ ಹೆಚ್ಚಳವೇ ಇದಕ್ಕೆ ಕಾರಣ.
|