ಏಷಿಯಾದ ಪ್ರಮುಖ ಶೇರು ವಹಿವಾಟು ಕೇಂದ್ರಗಳಲ್ಲಿ ದುರ್ಬಲ ಶೇರು ಖರೀದಿ ಮತ್ತು ತೈಲ ಕಂಪನಿಗಳಿಂದ ಡಾಲರ್‌ಗೆ ಹೆಚ್ಚಿದ ಬೇಡಿಕೆಯ ಪರಿಣಾಮವಾಗಿ ಮಂಗಳವಾರದ ಪ್ರಾರಂಭಿಕ ವಿದೇಶಿ ವಿನಿಮಯ ವಹಿವಾಟಿನಲ್ಲಿ ರೂಪಾಯಿ ಮೌಲ್ಯದಲ್ಲಿ ಆರು ಪೈಸೆಗಳಷ್ಟು ಕುಸಿತ ಕಂಡಿದೆ.
ಸಾದಾರಣ ಪ್ರಮಾಣದಲ್ಲಿ ಅಂತರ್ ಬ್ಯಾಂಕ್ ವಿದೇಶಿ ವಿನಿಮಯವು ಪ್ರತಿ ಡಾಲರಿಗೆ 39.42/43 ರೂನಂತೆ ಮೊದಲು ವಿದೇಶಿ ವಿನಿಮಯ ಪ್ರಾರಂಭವಾಗಿ ನಂತರ 39.41/43ಗೆ ತಲುಪಿತು. ವಹಿವಾಟು ಪ್ರಾರಂಭವಾದ ಕೆಲವು ಸಮಯದ ನಂತರ ರೂಪಾಯಿ ಮೌಲ್ಯವು 39.48/49 ಗಳಿಗೆ ಕುಸಿತ ಕಂಡಿತು.
ಮಂಗಳವಾರ ಮುಂಜಾನೆ 10-30ರ ಹೊತ್ತಿಗೆ ಶೇರು ಸೂಚ್ಯಂಕವು 132 ಅಂಶಗಳ ಕುಸಿತಕ್ಕೆ ಒಳಗಾಗಿದ್ದರಿಂದ ರೂಪಾಯಿ ಮೌಲ್ಯದಲ್ಲಿ ಇಳಿಕೆಯಾಗಲು ಕಾರಣ ಎಂದು ಮಾರುಕಟ್ಟೆಯಲ್ಲಿನ ವಿದೇಶಿ ವಿನಿಮಯ ದಲ್ಲಾಳಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಕಚ್ಚಾತೈಲ ಆಮದುದಾರರು ತಮ್ಮ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಡಾಲರ್ ಖರೀದಿಗೆ ಆದ್ಯತೆ ನೀಡಿದರು. ಸೋಮವಾರದಂದು ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಬೆಲೆ 93.80ಕ್ಕೆ ತಲುಪಿತ್ತು.
ಅಮೆರಿಕದ ಬಡ್ಡಿ ದರಗಳಲ್ಲಿ ಕಡಿತವಾಗುವ ಸಾಧ್ಯತೆ ಇರುವುದರಿಂದ ರೂಪಾಯಿ ಮತ್ತೆ ತನ್ನ ಮೌಲ್ಯವನ್ನು ವೃದ್ದಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವಿದೇಶಿ ವಿನಿಮಯದಲ್ಲಿ ನಿರತರಾಗಿರುವ ವ್ಯಾಪಾರಸ್ಥರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದೇ ಸಮಯದಲ್ಲಿ ಯುರೋ ಮತ್ತು ಕೆನಡಿಯನ್ ಡಾಲರ್‌ಗಳ ಎದುರು ಅಮೆರಿಕನ್ ಡಾಲರ್ ಮೌಲ್ಯದಲ್ಲಿ ಅಪಮೌಲ್ಯವಾಗಿದೆ.
|