ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ ಭರ್ಜರಿ ಏರಿಕೆ ಕಂಡು ಸೂಚ್ಯಂಕ ಬಹುತೇಕ 20,000ಕ್ಕೆ ತಲುಪುವತ್ತ ನಾಗಾಲೋಟಗೈದಿದೆ. ಇನ್ನೂ ಏರಿಕೆ ಕಾಣುವ ಲಕ್ಷಣಗಳಿವೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬಿಎಸ್ಇ 30 ಷೇರು ಸೂಚ್ಯಂಕ 311.35 ಪಾಯಿಂಟ್ ಏರಿಕೆ ಕಂಡು 19,906.10ಕ್ಕೆ ತಲುಪಿದೆ. ಇದಕ್ಕೂ ಮೊದಲು ಕಳೆದ ವಾರ ಶೇ.4.2ರಷ್ಟು ಏರಿಕೆ ಕಂಡಿತ್ತು. 2008ರ ಜನವರಿ ನಂತರ ಇದು ಅತೀ ಹೆಚ್ಚಿನ ಏರಿಕೆಯಾಗಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 95.50 ಪಾಯಿಂಟ್ ಏರಿಕೆ ದಾಖಲಿಸಿ 5,980.45ಕ್ಕೆ ತಲುಪಿದೆ.
ಏರಿಕೆ ಕಂಡ ಷೇರುಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ 12.95 ರೂಪಾಯಿ ಏರಿಕೆ ಕಂಡರೆ, ಇನ್ಫೋಸಿಸ್ ಟೆಕ್ನಾಲಜೀಸ್ 31.80 ರೂಪಾಯಿ ಏರಿಕೆ ದಾಖಲಿಸಿದೆ. ಐಸಿಐಸಿಐ ಬ್ಯಾಂಕ್ 12.80 ರೂ ಏರಿದರೆ ಎಸ್‌ಬಿಐ 13.55 ರೂಪಾಯಿ ಏರಿದೆ.