ಕಳೆದ ಕೆಲವು ವಾರಗಳಲ್ಲಿ ಏರುಗತಿ ಸಾಧಿಸಿದ್ದ ಮುಂಬೈನ ಬಿಎಸ್‌ಇ ಶೇರು ಸೂಚ್ಯಂಕ ದಿನದ ವಹಿವಾಟಿನ ಅಂತ್ಯಕ್ಕೆ ಕುಸಿತ ಅನುಭವಿಸಿದ್ದು, 20,000 ಅಂಶಕ್ಕಿಂತಲೂ ಕೆಳಗಿಳಿದಿದೆ.
ಬುಧವಾರದ ವಹಿವಾಟಿನ ಅತ್ಯಕ್ಕೆ 148.52 ಅಂಶ ಕುಸಿತ ಕಂಡಿರುವ ಶೇರುಪೇಟೆ 19,956.34 ಅಂಶಗಳಿಗೆ ತಲುಪಿದೆ. ಪ್ರಸಕ್ತ ವರ್ಷ ಶೇಕಡಾ 14 ರಷ್ಟು ಏರಿಕೆ ಕಾಣುವ ಮೂಲಕ 20 ಸಾವಿರ ಅಂಶಗಳನ್ನು ಮರಳಿ ಪಡೆದಿದ್ದ ಸೂಚ್ಯಂಕ ಇಂದಿನ ವಹಿವಾಟಿನಲ್ಲಿ ಹಿನ್ನೆಡೆ ಅನುಭವಿಸಿತು.
ಅದೇ ರೀತಿ ರಾಷ್ಟ್ರೀಯ ಶೇರುಪೇಟೆಯಾದ ನಿಫ್ಟಿ ಕೂಡಾ 38.20 ಅಂಶ ಕುಸಿತ ಕಾಣುವ ಮೂಲಕ 5,991.30 ಅಂಶಗಳಿಗೆ ತಲುಪಿದೆ. ಉಕ್ಕು ಕ್ಷೇತ್ರದ ಶೇರುಪೇಟೆ ಹೆಚ್ಚಿನ ಹಿನ್ನೆಡೆ ಅನುಭಿಸಿದೆ. ಸ್ಟೇರ್ಲೈಟ್ ಇಂಡಸ್ಟ್ರೀಸ್ ಶೇಕಡಾ 1.92 ಮತ್ತು ಹಿಂದೂಸ್ತಾನ್ ಜಿಂಕ್ ಶೇಕಡಾ 3.37ರಷ್ಟು ಕುಸಿತ ಕಂಡಿವೆ. ತೈಲ ಮತ್ತು ಗ್ಯಾಸ್ ಕ್ಷೇತ್ರದ ಶೇರುಗಳು ಶೇಕಡಾ 0.81ರಷ್ಟು ಕುಸಿತ ಅನುಭವಿಸಿದೆ.