ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 262.24 ಪಾಯಿಂಟ್ ಏರಿಕೆ ಕಾಣುವ ಮೂಲಕ ಮತ್ತೊಮ್ಮೆ ಪುಟಿದೆದ್ದಿದೆ.
ಬಿಎಸ್ಇ 30 ಷೇರು ಸೂಚ್ಯಂಕ ಇದಕ್ಕೂ ಮೊದಲ ವಹಿವಾಟಿನಲ್ಲಿ 68.02 ಪಾಯಿಂಟ್ ಇಳಿಕೆ ಕಂಡಿತ್ತು. ಇದೀಗ 262.24 ಪಾಯಿಂಟ್ ಏರಿಕೆ ದಾಖಲಿಸಿ 20,669.95ಕ್ಕೆ ತಲುಪಿದೆ.
ಮೆಟಲ್, ರಿಯಾಲ್ಟಿ, ಆಯಿಲ್ ಹಾಗೂ ಗ್ಯಾಸ್ ಷೇರುಗಳು ಉತ್ತಮ ಏರಿಕೆ ಕಂಡ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಜಿಗಿತ ಕಂಡು ಬಂದಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 77.60 ಪಾಯಿಂಟ್ ಅಂದರೆ ಶೇ.1.26ರಷ್ಟು ಏರಿಕೆ ದಾಖಲಿಸಿ 6,223.40ಕ್ಕೆ ತಲುಪಿದೆ.
ಇದೇ ವೇಳೆ ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.1.35ರಷ್ಟು ಏರಿಕೆಯನ್ನು ದಾಖಲಿಸಿದೆ. ಜಪಾನಿನ ನಿಕ್ಕಿ ಷೇರು ಮಾರುಕಟ್ಟೆ ಸೂಚ್ಯಂಕ ಶೇ.1.29ರಷ್ಟು ಏರಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.1.80ರಷ್ಟು ಏರಿದೆ.