ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 3 ದಿನಗಳ ಕುಸಿತ ಅಭಿಯಾನ ನಿಲ್ಲಿಸಿದ ಸೆನ್ಸೆಕ್ಸ್
(Sensex | National Stock Exchange Index | Nifty | Bombay Stock Exchange | BSE | NSE)
ಹಣದುಬ್ಬರ ಇಳಿಕೆ ಮತ್ತು ರಫ್ತು ಹೆಚ್ಚಳದಿಂದ ಪ್ರೇರಣೆ ಪಡೆದ ಬಾಂಬೇ ಸ್ಟಾಕ್ ಎಕ್ಸ್‌ಚೇಂಜ್ ಸೂಚ್ಯಂಕವು ಸೋಮವಾರ ದಿನದ ವಹಿವಾಟು ಮುಗಿಯುವ ಹೊತ್ತಿಗೆ 153 ಅಂಶ ಮೇಲಕ್ಕೇರಿ ಮಾರುಕಟ್ಟೆಯಲ್ಲಿ ಸತತ ಮೂರು ದಿನಗಳ ಕುಸಿತದ ಅಭಿಯಾನವನ್ನು ನಿಲ್ಲಿಸಿತು.
ಸೋಮವಾರ ವಹಿವಾಟಿನ ಅಂತ್ಯದಲ್ಲಿ 152.80 ಅಂಶ ಮೇಲಕ್ಕೇರಿದ ಸೆನ್ಸೆಕ್ಸ್, 20,309.69ರಲ್ಲಿ ಕೊನೆಗೊಂಡಿತು. ಹಿಂದಿನ ಮೂರು ಅವಧಿಯ ಟ್ರೇಡಿಂಗ್‌ನಲ್ಲಿ ಸೆನ್ಸೆಕ್ಸ್ 775 ಅಂಶ ಕುಸಿತ ದಾಖಲಿಸಿ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿತ್ತು.
ಇದೇ ರೀತಿಯಲ್ಲಿ ವಿಸ್ತೃತ ಅವಕಾಶದ ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್ ಸೂಚ್ಯಂಕ ನಿಫ್ಟಿ ಕೂಡ 49.95 ಅಂಶ ಮೇಲಕ್ಕೇರಿತು. 6128.75 ಹಾಗೂ 6039.40ರ ನಡುವೆ ಓಲಾಡುತ್ತಾ ಅದು ಕೊನೆಗೆ 6121.60ರಲ್ಲಿ ಅಂತ್ಯಗೊಂಡಿತು.
ಸೂಚ್ಯಂಕ ಏರಿಕೆಗೆ ಪ್ರಮುಖವಾಗಿ ಬೆಂಬಲ ನೀಡಿದ ಶೇರುಗಳೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಸಿಪ್ಲಾ, ಮಹೀಂದ್ರಾ ಆಂಡ್ ಮಹೀಂದ್ರಾ ಮತ್ತು ಟಾಟಾ ಸ್ಟೀಲ್. ಇವೆಲ್ಲವೂ ಶೇ.1-4ರವರೆಗೆ ಗಳಿಕೆ ದಾಖಲಿಸಿದವು.
ಸೂಚ್ಯಂಕ ತೀವ್ರ ಏರಿಕೆಯಾಗದಂತೆ ಬ್ರೇಕ್ ಹಾಕಿದ್ದೆಂದರೆ ರಿಲಯನ್ಸ್ ಇಂಡಸ್ಟ್ರೀಸ್ ಶೇರುಗಳು. ಅದರ ಬೆಲೆ ದಿನದಲ್ಲಿ 7.85 ರೂ. ಕಳೆದುಕೊಂಡು 1054ಕ್ಕೆ ಇಳಿಯಿತು. ರಿಲಯನ್ಸ್ ಇನ್ಫ್ರಾ ಅಂತೂ 17.75 ರೂಪಾಯಿ ಕುಸಿತ ಕಂಡು 1029.60ಕ್ಕೆ, ಮಾರುತಿ ಸುಜುಕಿ 15.15 ರೂ. ಕುಸಿತ ದಾಖಲಿಸಿ 1440 ರೂಪಾಯಿಗೆ ಮತ್ತು ಡಿಎಲ್ಎಫ್ 5.50 ರೂ. ಕುಸಿತ ಕಂಡು 322.05 ರೂಪಾಯಿಗೆ ಇಳಿಯಿತು.
ಸೋಮವಾರದ ವಹಿವಾಟಿನಲ್ಲಿ ಬ್ಯಾಂಕಿಂಗ್ ಸೆಕ್ಟರ್ ಸೂಚ್ಯಂಕವು ಅತೀ ಹೆಚ್ಚು ಲಾಭ ಗಳಿಸಿತು. ಅದು ಶೇ.2.43ರಷ್ಟು ಮೇಲಕ್ಕೇರಿ 14,509.60ಕ್ಕೆ ತಲುಪಿತು. ಹೆಲ್ತ್ ಕೇರ್ ಸೂಚ್ಯಂಕವು ಶೇ.1.07 ಗಳಿಕೆ ದಾಖಲಿಸಿ 6655.70ಕ್ಕೆ ಏರುವ ಮೂಲಕ ಎರಡನೇ ಅತೀ ಹೆಚ್ಚು ಲಾಭ ಗಳಿಸಿದ ಸೂಚ್ಯಂಕವಾಯಿತು. ಮಾಹಿತಿ ತಂತ್ರಜ್ಞಾನ ಸೆಕ್ಟರ್ ಸೂಚ್ಯಂಕವೂ ಶೇ.0.86 ಗಳಿಕೆ ಕಂಡು ದಿನದಂತ್ಯಕ್ಕೆ 6098.94ರಲ್ಲಿ ಕೊನೆಗೊಂಡಿತು.
ಇದೇ ವೇಳೆ, ಹಿಂದಿನ ತಿಂಗಳಿಗಿಂತ ಅಕ್ಟೋಬರ್ ತಿಂಗಳ ಹಣದುಬ್ಬರ ದರವು ಶೇ.8.62ರಿಂದ ಶೇ.8.58ಕ್ಕೆ ಇಳಿಕೆಯಾಗಿ ನೆಮ್ಮದಿ ಮೂಡಿಸಿದರೆ, ದೇಶದ ರಫ್ತು ಕೂಡ ಶೇ.21.3 ಪ್ರಗತಿ ಕಂಡು ಅಖ್ಟೋಬರ್ ತಿಂಗಳಲ್ಲಿ 18 ಶತಕೋಟಿ ಡಾಲರ್‌ಗೆ ತಲುಪಿದೆ. ಆಮದು ಕೂಡ ಶೇ.6.8 ಪ್ರಗತಿ ದಾಖಲಿಸಿ 27.7 ಶತಕೋಟಿ ಡಾಲರ್ ತಲುಪಿದೆ.