ದುರ್ಬಲ ಏಷ್ಯನ್ ಮಾರುಕಟ್ಟೆ ಮತ್ತು ಲಾಭಕ್ಕಾಗಿ ಶೇರು ಮಾರಾಟದ ಭರಾಟೆಯಿಂದಾಗಿ ಮುಗ್ಗರಿಸಿದ ಸ್ಟಾಕ್ ಮಾರುಕಟ್ಟೆಯಲ್ಲಿ, ಸೆನ್ಸೆಕ್ಸ್ 20 ಸಾವಿರಕ್ಕಿಂತ ಕೆಳಗಿಳಿದರೆ, ನಿಫ್ಟಿ 6 ಸಾವಿರಕ್ಕಿಂತ ಕೆಳಗೆ ಬಂದು, ಹಲವು ಕಂಪನಿಗಳ ಶೇರುಗಳ ನಷ್ಟಕ್ಕೆ ಕಾರಣವಾಯಿತು.
ಸೋಮವಾರ ಏರಿಕೆ ಕಂಡಿದ್ದ ಶೇರು ಮಾರುಕಟ್ಟೆ ಮಂಗಳವಾರ ಬೆಳಗ್ಗೆಯೇ ಕುಸಿತದೊಂದಿಗೆ ಆರಂಭವಾಗಿ, ದಿನದ ಅಂತ್ಯದಲ್ಲಿ ಬಾಂಬೇ ಸ್ಟಾಕ್ ಎಕ್ಸ್‌ಚೇಂಜ್ ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಶೇ.2.19 ಕುಸಿತ ಕಂಡು, 445 ಅಂಶ ಕೆಳಕ್ಕಿಳಿದು 19,865ರಲ್ಲಿ ಅಂತ್ಯಗೊಂಡಿತು. ಅದೇ ರೀತಿ ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್ ಸೂಚ್ಯಂಕ ನಿಫ್ಟಿಯು ಶೇ.2.17ರಷ್ಟು ಮುಗ್ಗರಿಸಿ, 132.90 ಅಂಕ ಕುಸಿದು 5988.70ರಲ್ಲಿ ಕೊನೆಗೊಂಡಿತು.
ವಿಶಾಲ ತಳಹದಿಯ ಮಾರುಕಟ್ಟೆ ಸೂಚ್ಯಂಕಗಳು ಕೂಡ ತೀರಾ ಆಘಾತ ಅನುಭವಿಸಿದವು. ಬಿಎಸ್ಇ ಮಿಡ್‌ಕ್ಯಾಪ್ ಶೇ.2.15ರಷ್ಟು ಕುಸಿದು 8266 ಅಂಶಗಳಿಗೆ ತಲುಪಿದರೆ, ಬಿಎಸ್ಇ ಸ್ಮಾಲ್‌ಕ್ಯಾಪ್ ಸೂಚ್ಯಂಕವು ಸುಮಾರು ಶೇ.3ರಷ್ಟು ಕೆಳಗಿಳಿದು 10,567 ಅಂಶಗಳಿಗೆ ತಲುಪಿತು.
ದೇಶದ ಅತಿದೊಡ್ಡ ತಾಮ್ರ ಮತ್ತು ತವರ ಲೋಹ ಉತ್ಪಾದಕ ಸ್ಟರ್ಲೈಟ್ ಇಂಡಸ್ಟ್ರೀಸ್ ಶೇ.5.4ರಷ್ಟು ಭರ್ಜರಿ ಕುಸಿತ ಕಂಡಿತು. ಇದಕ್ಕೆ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲೋಹದ ಬೆಲೆ ಕುಸಿದಿರುವುದು. ಹಿಂಡಾಲ್ಕೋ ಇಂಡಸ್ಟ್ರೀಸ್ ಕೂಡ ಶೇ.5.12 ಇಳಿದು, ಶೇರು ಬೆಲೆ 212.05ಕ್ಕೆ ತಲುಪಿತು.
ವಾಹನ ಮತ್ತು ಬ್ಯಾಂಕಿಂಗ್ ವಲಯದಲ್ಲಿಯೂ ಮಾರಾಟದ ಭರಾಟೆಯ ಒತ್ತಡ ಹೆಚ್ಚಾಗಿತ್ತು. ಟಾಟಾ ಮೋಟಾರ್ಸ್ ಸುಮಾರು ಶೇ.4ರಷ್ಟು ಕುಸಿತ ಕಂಡರೆ, ಮಹೀಂದ್ರಾ ಕೂಡ ಶೇ.3ರಷ್ಟು ಬೆಲೆ ಕಳೆದುಕೊಂಡಿತು.