ಮುಂಬೈ: ಬಾಂಬೇ ಸ್ಟಾಕ್ ಎಕ್ಸ್‌ಚೇಂಜ್ ಬಿಎಸ್ಇ, ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್ ಎನ್ಎಸ್ಇ ,ಫಾರೆಕ್ಸ್ ತೈಲ, ಎಣ್ಣೆ ಬೀಜಗಳು, ಕರಿಮೆಣಸು, ಕೊಬ್ಬರಿ ಮತ್ತು ಇತರ ಮಾರುಕಟ್ಟೆಗಳು ಬುಧವಾರ ಈದ್ ಉಲ್ ಜುಹಾ ಪ್ರಯುಕ್ತ ಮುಚ್ಚಿದ್ದು, ಇಂದು ವಹಿವಾಟು ನಡೆಸುತ್ತಿಲ್ಲ.
ಮಂಗಳವಾರ ಶೇರು ಮಾರುಕಟ್ಟೆಯು 450ಕ್ಕೂ ಹೆಚ್ಚು ನಷ್ಟ ಅನುಭವಿಸುವಲ್ಲಿ ಬಿಎಸ್ಇಯಲ್ಲಿ ಪ್ರಮುಖ ಕೊಡುಗೆ ನೀಡಿದ ಶೇರುಗಳೆಂದರೆ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಲಾರ್ಸನ್ ಆಂಡ್ ಟ್ಯೂಬ್ರೋ. ರಿಲಯನ್ಸ್ ಶೇ.2.24 ನಷ್ಟ ಅನುಭವಿಸಿ 1030.35ಕ್ಕೆ ತಲುಪಿದರೆ, ಎಲ್ಆಂಡ್‌ಟಿ ಶೇರು ಬೆಲೆ ಶೇ.2.53 ಕುಸಿತವಾಗಿ 2007.40ಕ್ಕೆ ತಲುಪಿತು.
ಶೇರು ಮಾರುಕಟ್ಟೆಯ ಕುಸಿತದಿಂದಾಗಿ ಮಂಗಳವಾರ ಅತೀ ಹೆಚ್ಚು ಬಾಧೆಗೊಳಗಾದ ಶೇರುಗಳೆಂದರೆ ಲೋಹದ ಉದ್ಯಮದ ಶೇರುಗಳು. ಸೆನ್ಸೆಕ್ಸ್ ಪತನದಿಂದಾಗಿ ತಾಮ್ರ ಉತ್ಪಾದಕ ಸಂಸ್ಥೆ ಸ್ಟರ್ಲೈಟ್ ಅತೀ ಹೆಚ್ಚು ನಷ್ಟ ಅನುಭವಿಸಿದೆ. ಅದು ಶೇ.5.4 ಮೌಲ್ಯ ಕಳೆದುಕೊಂಡು 172.60ಗೆ ತಲುಪಿದೆ. ಅಲ್ಯೂಮೀನಿಯಂ ಉತ್ಪಾದಕ ಹಿಂಡಾಲ್ಕೋ ಕೂಡ ಶೇ.5.21ರಷ್ಟು ಕುಸಿತ ಕಂಡು 212.05ಕ್ಕೆ ಮತ್ತು ಉಕ್ಕು ಸಂಸ್ಥೆ ಜಿಂದಾಲ್ ಸ್ಟೀಲ್ ಶೇ.1.13 ಕುಸಿತ ಕಂಡು 672 ರೂ.ಗೆ ತಲುಪಿದೆ. ಟಾಟಾ ಸ್ಟೀಲ್ ಕೂಡ ಹಿಂದಿನ ಅವಧಿಯ ಲಾಭವನ್ನು ಕಳೆದುಕೊಂಡು, ಶೇ.1.91 ನಷ್ಟ ಅನುಭವಿಸಿ 605.35ಕ್ಕೆ ತಲುಪಿತ್ತು.
ಮಾರುಕಟ್ಟೆ ಕುಸಿತ ಕಂಡು ಹೆಚ್ಚಿನ ಶೇರುಗಳು ಹಿನ್ನಡೆ ಅನುಭವಿಸಿದ್ದರೂ, ಭಾರತಿ ಏರ್‌ಟೆಲ್ ಮಾತ್ರ ಲಾಭ ದಾಖಲಿಸಿದೆ. ಟೆಲಿಕಾಂ ಕಂಪನಿಯು ಶೇ.1.16ರಷ್ಟು ಗಳಿಕೆ ಕಂಡು, ಅದರ ಶೇರಿನ ಬೆಲೆಯು 313.10ಕ್ಕೆ ಏರಿಕೆಯಾಗಿದೆ.
ಈ ನಡುವೆ, ಮಂಗಳವಾರ ಡಾಲರ್ ಎದುರು ಮತ್ತಷ್ಟು ಕುಸಿದ ರೂಪಾಯಿ, ಏಳು ಪೈಸೆಗಳಷ್ಟು ಅಗ್ಗವಾಗಿ ಡಾಲರ್ ಒಂದರ ಬೆಲೆ 45.31/32ಕ್ಕೆ ತಲುಪಿತು. ಸೋಮವಾರ ಡಾಲರ್ ಬೆಲೆ 45.24/25 ರೂಪಾಯಿ ಇತ್ತು.
ಮತ್ತೊಂದೆಡೆ, ಜಾಗತಿಕ ಕಚ್ಚಾ ತೈಲದ ಬೆಲೆಯು ಇಳಿಕೆಯಾಗಿದ್ದು, ಮಂಗಳವಾರ ದಿನದಂತ್ಯದಲ್ಲಿ ಬ್ಯಾರೆಲ್ ಒಂದಕ್ಕೆ 84 ಡಾಲರ್‌ಗೆ ತಲುಪಿತ್ತು.