ದುರ್ಬಲ ಟ್ರೆಂಡ್‌ನಿಂದ ಪ್ರೇರಣೆ ಪಡೆದು ಶುಕ್ರವಾರ ಬಾಂಬೇ ಸ್ಟಾಕ್ ಎಕ್ಸ್‌ಚೇಂಜ್ ಮಾರುಕಟ್ಟೆಯು ಕುಸಿತದೊಂದಿಗೇ ಆರಂಭವಾಗಿದ್ದು, ಸೆನ್ಸೆಕ್ಸ್ 93 ಅಂಶ ಕೆಳಕ್ಕಿಳಿಯಿತು.
ಗುರುವಾರದ ತೀವ್ರ ಏರುಪೇರಿನಿಂದ ಕೂಡಿದ ಅವಧಿಯಲ್ಲಿ 65 ಅಂಶಗಳಷ್ಟು ಮೇಲೇರಿದ್ದ 30 ಶೇರುಗಳ ಬಿಎಸ್ಇ ಮಾರುಕಟ್ಟೆ ಸೂಚ್ಯಂಕವು ಶುಕ್ರವಾರ ವಹಿವಾಟು ಆರಂಭವಾದಾಗ 19837.67ರಲ್ಲಿ ಅಂದರೆ 92.97 ಅಂಶಗಳನ್ನು ಕುಸಿತದೊಂದಿಗೆ ಆರಂಭವಾಗಿತ್ತು.
ವಿಸ್ತೃತ ಆಧಾರದ ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್ ಸೂಚ್ಯಂಕ ನಿಫ್ಟಿಯು ಕೂಡ 31.70 ಅಂಶಗಳಷ್ಟು ಕುಸಿತ ಕಂಡು, 5967.10ರಲ್ಲಿ ವಹಿವಾಟು ನಡೆಸುತ್ತಿತ್ತು. ಸ್ಥಿರಾಸ್ಥಿ, ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ಸ್ಟಾಕುಗಳು ಕುಸಿತದ ಮುಂದಾಳುತ್ವ ವಹಿಸುತ್ತಿದ್ದವು.
ಈಗಿರುವ ಮಟ್ಟದಲ್ಲೇ ಚಿಲ್ಲರೆ ಮಾರಾಟಗಾರರು ಮತ್ತು ಶೇರುಗಳ ಮಾರಾಟದ ಭರಾಟೆಯಿಂದಾಗಿ ಈ ಕುಸಿತ ಕಂಡುಬಂದಿದೆ ಎಂದು ವಿಶ್ಲೇಷಿಸುತ್ತಾರೆ ಬ್ರೋಕರ್‌ಗಳು.
2ಜಿ ಸ್ಪೆಕ್ಟ್ರಂ ತನಿಖೆಯ ಆತಂಕದಿಂದಾಗಿ ರಿಲಯನ್ಸ್ ಶೇರುಗಳು ಕೂಡ ಮಾರಾಟದ ಒತ್ತಡದಲ್ಲಿ ಸಿಲುಕಿದ್ದು, ಬೆಳಿಗ್ಗೆ ಶೇ.3.83ರಷ್ಟು ಕುಸಿತಕಂಡು 148 ರೂಪಾಯಿ ಬೆಲೆಗೆ ತಲುಪಿತ್ತು.
ಏಷ್ಯಾದ ಇತರ ಮಾರುಕಟ್ಟೆಗಳು ಕೂಡ ಶುಕ್ರವಾರ ಸಮ್ಮಿಶ್ರ ಫಲದೊಂದಿಗೆ ಆರಂಭ ಕಂಡಿವೆ. ಹಾಂಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕವು ಶೇ.1.04ರಷ್ಟು ಕೆಳಕ್ಕಿಳಿದಿದ್ದರೆ, ಜಪಾನಿನ ನಿಕ್ಕೀ ಸೂಚ್ಯಂಕವು ಅಲ್ಪ ಚೇತರಿಕೆಯೊಂದಿಗೆ, ಅಂದರೆ ಶೇ.0.61ರಲ್ಲಿ ವಹಿವಾಟು ಆರಂಭಿಸಿದೆ. ಇದು ಕಳೆದ ಐದು ತಿಂಗಳಲ್ಲಿ ಗರಿಷ್ಠ.
ಅಮೆರಿಕದಲ್ಲಿ ಡೋ ಜೋನ್ಸ್ ಕೈಗಾರಿಕಾ ಸರಾಸರಿ ಸೂಚ್ಯಂಕವು ಶೇ.1.57ರಷ್ಟು ಏರಿಕೆಯೊಂದಿಗೆ ಅಂತ್ಯ ಕಂಡಿದೆ. ಇದು ನಿರೀಕ್ಷೆಗಿಂತ ಮಿಗಿಲಾದದ್ದು ಮತ್ತು ಇದರ ಹಿಂದೆ ಐರ್ಲೆಂಡ್‌ನ ಸಾಲದ ಬಿಕ್ಕಟ್ಟು ಅಂತ್ಯವಾಗುವ ನಿರೀಕ್ಷೆಯ ಭರವಸೆಯೂ ಇದೆ ಎಂದು ವಿಶ್ಲೇಷಿಸಲಾಗಿದೆ.