ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟು ಹಾಗೂ 2ಜಿ ತರಂಗಾಂತರಗಳ ಹಂಚಿಕೆ ಕುರಿತಂತೆ ಸರಕಾರ ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಟೆಲಿಕಾಂ ಕ್ಷೇತ್ರದ ಶೇರುಗಳ ಮಾರಾಟದಿಂದಾಗಿ ಸೂಚ್ಯಂಕ 238 ಪಾಯಿಂಟ್‌ಗಳ ಕುಸಿತ ಕಂಡಿದೆ.
2ಜಿ ತರಂಗಾಂತರಗಳ ಹಂಚಿಕೆ ಹಗರಣ ಕುರಿತಂತೆ ಸಿಬಿಐ ಅಧಿಕಾರಿಗಳು ಮಾಜಿ ಕೇಂದ್ರ ಸಚಿವ ಎ.ರಾಜಾ ಹಾಗೂ ಇತರ ಸಂಬಂಧಿಗಳ ನಿವಾಸಗಳ ಮೇಲೆ ದಾಳಿ ನಡೆಸುತ್ತಿರುವುದರಿಂದ ಟೆಲಿಕಾಂ ಕ್ಷೇತ್ರದ ಮೇಲೆ ಭಾರಿ ಪರಿಣಾಮ ಬೀರಿದೆ.
ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 47 ಪಾಯಿಂಟ್‌ಗಳ ಕುಸಿತ ಕಂಡ ಬಿಎಸ್‌ಇ-30 ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ ಮತ್ತೆ 238.16 ಪಾಯಿಂಟ್‌ಗಳ ಕುಸಿತ ಕಂಡು 19,696.49 ಅಂಕಗಳಿಗೆ ತಲುಪಿದೆ.
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ, ಇಂದಿನ ವಹಿವಾಟಿನ ಮುಕ್ತಾಯಕ್ಕೆ 72.85 ಪಾಯಿಂಟ್‌ಗಳ ಇಳಿಕತೆ ಕಂಡು 5,903.70 ಅಂಕಗಳಿಗೆ ತಲುಪಿದೆ.
ಶೇರುಪೇಟೆಯ ವಹಿವಾಟಿನ ಮುಕ್ತಾಯಕ್ಕೆ ಹಲವಾರು ಕ್ಷೇತ್ರಗಳ ಶೇರುಗಳ ಮಾರಾಟದಲ್ಲಿ ಹೆಚ್ಚಳವಾಗಿದ್ದರಿಂದ, ವಹಿವಾಟಿನಲ್ಲಿ ಕುಸಿತವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.