ಸೋಮವಾರ ಒಂದಿಷ್ಟು ನಿರಾಳತೆ ಮೂಡಿಸಿದ್ದ ಮುಂಬೈ ಶೇರು ವಿನಿಮಯ ಸೂಚ್ಯಂಕ ಸೆನ್ಸೆಕ್ಸ್, ಮಂಗಳವಾರ 152 ಅಂಶಗಳ ಏರಿಕೆಯೊಂದಿಗೆ ಆರಂಭ ಕಂಡಿದ್ದು, ಮಾರುಕಟ್ಟೆಯಲ್ಲಿ ಆಶಾವಾದ ಚಿಗುರಿಸಿದೆ. ಕಾರ್ಪೊರೇಟ್ ಕಂಪನಿಗಳ ಉತ್ತಮ ಲಾಭಾಂಶ ಪ್ರಕಟಣೆ ಮತ್ತು ಜಾಗತಿಕ ಮಾರುಕಟ್ಟೆಯ ಸ್ಥಿರತೆಯಿಂದಾಗಿ ಸೂಚ್ಯಂಕ ಏರಿಕೆ ಕಂಡು, 19 ಸಾವಿರದ ಗಡಿ ದಾಟಿದೆ.
30 ಶೇರುಗಳ ಸೂಚ್ಯಂಕವು 152.11 ಅಂಶ ಮೇಲಕ್ಕೇರಿ 19,034.36ರಲ್ಲಿ ತೆರೆದುಕೊಂಡರೆ, ರಾಷ್ಟ್ರೀಯ ಶೇರು ವಿನಿಮಯ ಸೂಚ್ಯಂಕ ನಿಫ್ಟಿ ಕೂಡ 58.35 ಅಂಶ ಮೇಲಕ್ಕೆ ನೆಗೆದು 5713.10ರಲ್ಲಿ ವಹಿವಾಟು ಪ್ರಾರಂಭಿಸಿತು.
ಜಾಗತಿಕ ಮಟ್ಟದಲ್ಲಿ, ಹಾಂಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕವು ಶೇ.0.22ರಷ್ಟು ಏರಿಕೆಯೊಂದಿಗೆ, ಜಪಾನ್‌ನ ನಿಕ್ಕೀ ಸೂಚ್ಯಂಕವು ಶೇ.040ರಷ್ಟು ಕುಸಿತದೊಂದಿಗೆ ವಹಿವಾಟು ನಡೆಸಿದವು. ಅಮೆರಿಕದ ಡೋ ಜೋನ್ಸ್ ಕೈಗಾರಿಕಾ ಸೂಚ್ಯಂಕವು ಶೇ.0.47 ಹೆಚ್ಚಳದೊಂದಿಗೆ ಸೋಮವಾರ ವಹಿವಾಟು ಮುಕ್ತಾಯಗೊಳಿಸಿತ್ತು.