ಛತ್ತೀಸ್‌ಗಢದ ಎರಡನೇ ಹಂತದ ಚುನಾವಣೆಯ ಮತದಾನ ಗುರುವಾರ ಬೆಳಿಗ್ಗೆ ಆರಂಭಗೊಂಡಿದ್ದು, ಮಧ್ನಾಹ್ನ 2ಗಂಟೆಯವರೆಗೆ ಶೇ.37ರಷ್ಟು ಮತದಾನ ನಡೆದಿರುವುದಾಗಿ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಛತ್ತೀಸ್‌ಗಢದ ಎರಡನೇ ಹಾಗೂ ಅಂತಿಮ ಹಣಾಹಣಿಯಲ್ಲಿ 51 ಕ್ಷೇತ್ರಗಳಿಗೆ ಇಂದು ಬೆಳಿಗ್ಗೆ 8ಗಂಟೆಗೆ ಮತದಾನ ಆರಂಭಗೊಂಡಿತ್ತು, ಮಧ್ನಾಹ್ನ 1.30ರವರೆಗೆ ಶೇ.37ರಷ್ಟು ಮತದಾನವಾಗಿದ್ದು, ರಾಯ್‌ಪುರ್ ಜಿಲ್ಲೆಯಲ್ಲಿ ಶೇ.38ರಷ್ಟು ಮತದಾನ ನಡೆದಿರುವುದಾಗಿ ಸಹಾಯಕ ಚುನಾವಣಾಧಿಕಾರಿ ಅರವಿಂದ್ ದೀಕ್ಷಿತ್ ಹೇಳಿದ್ದಾರೆ.
ಬಿಲಾಸ್‌ಪುರದಲ್ಲಿ ದಾಖಲೆಯಲ್ಲಿ ಶೇ.32ರಷ್ಟು ಮತದಾನವಾಗಿದ್ದರೆ, ರಾಯ್‌ಗಢದಲ್ಲಿ ಶೇ. 36, ಕೊರ್‌ಬಾ ಜಿಲ್ಲೆಯಲ್ಲಿ ಶೇ.38ರಷ್ಟು ಸರ್‌ಗುಜಾದಲ್ಲಿ ಶೇ.40, ಜಾಶ್‌ಪುರ್ ಶೇ.38, ಕೊರಿಯಾ ಶೇ.35, ಜಾನಿಗಿರ್‌ನಲ್ಲಿಯೂ ಶೇ.35ರಷ್ಟು ಮತ ಚಲಾಯಿಸಿದ್ದಾರೆ ಎಂದು ದೀಕ್ಷಿತ್ ವಿವರಿಸಿದ್ದಾರೆ.
ಏತನ್ಮಧ್ಯೆ 51ಕ್ಷೇತ್ರಗಳಲ್ಲೂ ಬಹುತೇಕ ಶಾಂತಿಯುತವಾಗಿ ಮತದಾನ ನಡೆಯುತ್ತಿರುವುದಾಗಿ ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು ಚುನಾವಣಾ ಅಖಾಡದಲ್ಲಿ 50 ಮಹಿಳೆಯರು ಸೇರಿದಂತೆ 687ಅಭ್ಯರ್ಥಿಗಳಿದ್ದಾರೆ. ಒಟ್ಟು 88,14,228ಮತದಾರರು ಮತ ಚಲಾಯಿಸಲಿದ್ದಾರೆ. |