ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ರಾಜಕೀಯ ಸಮರಕ್ಕೆ ಮತ್ತಷ್ಟು ಪುಷ್ಟಿ ಕೊಡುವ ನಿರ್ಧಾರವೊಂದು ಹೊರಬಂದಿದ್ದು, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ದೇಶದ ರಾಜಧಾನಿಯಲ್ಲಿ ನಡೆಸಲಿದ್ದ ರ‌್ಯಾಲಿಯೊಂದಕ್ಕೆ ದೆಹಲಿ ಪೊಲೀಸರು ಮಂಗಳವಾರ ಅನುಮತಿ ನಿರಾಕರಿಸಿದ್ದಾರೆ.
ಬಿಜೆಪಿಯ ಬೆಂಕಿಯ ಚೆಂಡು ನಾಯಕ ಎಂದೇ ಗುರುತಿಸಿಕೊಂಡಿರುವ ನರೇಂದ್ರ ಮೋದಿ ಇಂದು ದೆಹಲಿಯ ಪಂಚಕೂಯನ್ ರಸ್ತೆಯಲ್ಲಿ ಚುನಾವಣಾ ಪ್ರಚಾರ ರ‌್ಯಾಲಿ ನಡೆಸಬೇಕಿತ್ತು.
ಪೊಲೀಸರ ಪ್ರಕಾರ ಪ್ರಮುಖ ರಾಜಕೀಯ ಪಕ್ಷದ ಪ್ರಭಾವೀ ನಾಯಕರೊಬ್ಬರು ನಡೆಸುತ್ತಿರುವ ಸಮಾರಂಭದಿಂದ ಜನನಿಬಿಡ ಪ್ರದೇಶದಲ್ಲಿ ಸಂಚಾರ ಸುವ್ಯವಸ್ಥೆ ಹದಗೆಡುವ ಸಾಧ್ಯತೆಯಿರುವುದರಿಂದ ಅನುಮತಿ ನಿರಾಕರಿಸಲಾಗಿದೆ.
ಈ ಸಂಬಂಧ ಬಿಜೆಪಿ ಟೀಕಾ ಪ್ರಹಾರ ಮಾಡಿದ್ದು, ಪೊಲೀಸರು ಕಾಂಗ್ರೆಸ್ಸಿನ ಒತ್ತಡದಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ. ರ‌್ಯಾಲಿಗೆ ಅನುಮತಿ ನಿರಾಕರಿಸಿರುವ ಔಚಿತ್ಯವನ್ನು ಪ್ರಶ್ನಿಸಿರುವ ಬಿಜೆಪಿ, ಇತರ ಪಕ್ಷಗಳ ಮಹಾನ್ ನಾಯಕರು ಸಭೆಗಳನ್ನು ನಡೆಸುವಾಗ ಸಂಚಾರ ಸುವ್ಯವಸ್ಥೆ ಸಮಸ್ಯೆಯಾಗಿ ಕಾಡಿಲ್ಲವೇ? ಈಗ ಬಿಜೆಪಿ ನಡೆಸುವಾಗ ಯಾಕೆ ಆ ಸಮಸ್ಯೆ ಉದ್ಭವವಾಗುತ್ತದೆ ಎಂದು ಪ್ರಶ್ನಿಸಿದೆ.
ಈ ಬಗ್ಗೆ ಸಂಬಂಧಪಟ್ಟವರಿಗೆ ಮೊದಲೇ ಮಾಹಿತಿ ನೀಡಲಾಗಿತ್ತು ಎಂದೂ ಕೇಸರಿ ಪಕ್ಷದ ಪ್ರಮುಖರು ನಂತರ ಮಾಹಿತಿ ನೀಡಿದರು. ಇದೀಗ ನರೇಂದ್ರ ಮೋದಿ ರ‌್ಯಾಲಿಯ ಬದಲಿಗೆ ರೋಡ್ ಶೋ ನಡೆಸುವ ನಿರ್ಧಾರವನ್ನು ಕೈಗೊಂಡಿದ್ದಾರೆ. |