ನವದೆಹಲಿ: ಅಮೆರಿಕಾದ ಚುನಾಯಿತ ಅಧ್ಯಕ್ಷ ಬರಾಕ್ ಒಬಾಮಾ ಹನುಮಾನ್ ತಾಯಿತ ಇಟ್ಟುಕೊಳ್ಳುತ್ತಾರಾದರೆ ಭಾರತದ ಹಿಂದೂ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾಕೆ ಆ ರೀತಿ ಯೋಚಿಸಬಾರದು? ಪ್ರಸಕ್ತ ಅದೇ ದಾರಿಯಲ್ಲೇ ನಡೆಯುತ್ತಿರುವ ಮುಂದಿನ ಪ್ರಧಾನಿ ಎಂದೇ ಬಿಂಬಿಸಲಾಗುತ್ತಿರುವ ಬಿಜೆಪಿಯ ಲಾಲ್ ಕೃಷ್ಣ ಅಡ್ವಾಣಿಯವರು, ಒಬಾಮಾ ಬಳಸಿದ ಹಲವು ತಂತ್ರಗಳನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಳಸಲಿದ್ದಾರೆ.
ಬರಾಕ್ ಒಬಾಮಾಗೆ ಮೈಲೇಜ್ ತಂದುಕೊಟ್ಟ ವಾಹನದ ಹಿಂದೆ ಎಡಪಕ್ಷಗಳನ್ನು ಹೊರತುಪಡಿಸಿ ಭಾರತದ ಇನ್ನಿತರ ಎಲ್ಲಾ ಪಕ್ಷಗಳೂ ಓಡುತ್ತಿವೆ. ಅದರಲ್ಲೂ ಬಿಜೆಪಿ ಇತರೆಲ್ಲಾ ಪಕ್ಷಗಳಿಗಿಂತ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಪ್ರಧಾನಿ ಕುರ್ಚಿಯನ್ನು ಪಡೆದೇ ಸಿದ್ಧ ಎಂಬ ಮಂತ್ರವನ್ನು ಅಹರ್ನಿಶಿ ಪಠಿಸುತ್ತಿದೆ.
ಯುವ ಜನತೆಯ ಜತೆ ಬೆರೆತು ಮಾತುಕತೆ ನಡೆಸುವುದು, ಬೇರೆ ಬೇರೆ ವರ್ಗಗಳ ಜನರ ಹತ್ತಿರ ಹೋಗಿ ಅವರ ಔದ್ಯೋಗಿಕ ಅಥವಾ ವೃತ್ತಿಸಂಸ್ಥೆಗಳ ವಿಭಾಗಗಳಿಗೆ ಭೇಟಿ ಕೊಟ್ಟು ಯೋಜನೆಗಳನ್ನು ರೂಪಿಸುವುದು ಮುಂತಾದ ಹತ್ತು ಹಲವು ಪ್ರಕಾರಗಳಿಂದ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಇದರ ಜತೆಗೆ ಮಾಮೂಲಿ ಭಾಷಣಗಳು, ಸಾರ್ವಜನಿಕ ಸಮಾರಂಭಗಳು, ಮೆರವಣಿಗೆ, ಚಳವಳಿಗಳು ಬೇರೆ ಬೇರೆ ರೂಪಗಳಲ್ಲಿ ಇದ್ದೇ ಇವೆ.
ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಪ್ರದ್ಯುತ್ ಬೋರಾ ಇವೆಲ್ಲದರ ಹಿಂದಿನ ಕೀಲಿ ಕೈ. ಕೋಟ್ಯಂತರ ಜನರ ಮನಸ್ಸಿಗೆ ಹತ್ತಿರವಾಗಲು ಒಬಾಮಾ ಹಾದಿಯನ್ನು ಆರಿಸಿಕೊಂಡಿರುವ ಇವರೀಗಾಗಲೇ ತಂತ್ರಜ್ಞಾನ ವಿಭಾಗದಲ್ಲಿ ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ಯುವಜನತೆಯೆಡೆಯಲ್ಲಿ ಅಡ್ವಾಣಿಯವರನ್ನು ಜನಪ್ರಿಯಗೊಳಿಸಲು ಐಪಿಟಿವಿಯ ಮೂಲಕ 'ಅಡ್ವಾಣಿ ಟಿವಿ'ಯನ್ನೂ ಆರಂಭಿಸಲಾಗಿದೆ. ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಒಬಾಮಾ ಗೆಲುವಿಗೆ ಅನುಸರಿಸಿದ ಈ ರೀತಿಯ ಐಪಿಟಿವಿ ತಂತ್ರಜ್ಞಾನಗಳ ಮೂಲಕ ಅವರ ಭಾಷಣ, ಸಮಾರಂಭಗಳನ್ನು ಜಗತ್ತೇ ನೋಡಿತ್ತು.
ಇಷ್ಟೇ ಅಲ್ಲದೆ ಅಡ್ವಾಣಿ ಹೋಗುವ ಕಾರ್ಯಕ್ರಮ ಮತ್ತು ಅಲ್ಲಿನ ಸಭೆ-ಸಮಾರಂಭಗಳನ್ನು ಅದಕ್ಕೆಂದೇ ಮೀಸಲಾದ ಎಲ್‌ಕೆಅಡ್ವಾಣಿ.ಇನ್ ವೆಬ್‌ಸೈಟಿನಲ್ಲಿ ನೇರ ಪ್ರಸಾರ ಮಾಡುವ ತಯಾರಿಗಳನ್ನೂ ಬಿಜೆಪಿ ಭರ್ಜರಿಯಾಗಿಯೇ ನಡೆಸುತ್ತಿದೆ. ಇದರಿಂದ ಹೆಚ್ಚಿನವರಿಗೆ ಕೇವಲ ಮೌಸ್‌ನ ಒಂದು ಗುಂಡಿ ಒತ್ತುವುದರಿಂದ ಎಲ್ಲಿಂದ ಬೇಕಾದರೂ ಅಡ್ವಾಣಿಯವರ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಅದರಲ್ಲೂ ಮುಖ್ಯವಾಗಿ ಬಿಜೆಪಿ ಗುರಿಯಿಟ್ಟಿರುವುದು ದೇಶದ ಯುವಜನರ ಕಡೆಗೆ. ವಯಸ್ಸಾದ ನಾಯಕನಿಂದ ಯುವಜನಸ್ನೇಹಿ ವಿಚಾರಗಳನ್ನು ಆತ್ಮೀಯವಾಗಿ ಪಕ್ಷಕ್ಕೂ ಲಾಭ ತರುವಂತೆ ನೋಡಿಕೊಳ್ಳಲಾಗುತ್ತದೆ.
"ಇದು ಐಪಿಟಿವಿಯ ಯುಗ. ಈ ಆಧುನಿಕ ತಂತ್ರಜ್ಞಾನದ ಮೂಲಕ ಅಡ್ವಾಣಿಯವರ ಕಾರ್ಯಕ್ರಮಗಳ ಪ್ರಸಾರ ಮತ್ತು ಪ್ರಚಾರಕ್ಕೆ ಪಕ್ಷ ಈಗಾಗಲೇ ನಿರ್ಧರಿಸಿಯಾಗಿದೆ. ಪ್ರತಿಯೊಬ್ಬರಿಗೂ ಮನೆಯಲ್ಲೇ ಕುಳಿತು ಅಡ್ವಾಣಿಯವನ್ನು ನೇರವಾಗಿ ನೋಡುವ ಅವಕಾಶವಿದು" ಎಂದು ಬಿಜೆಪಿಯು ಐಪಿಟಿವಿ ಬಳಸಲುಯೋಜನೆ ರೂಪಿಸಿರುವ ಬೋರಾ ಹೇಳುತ್ತಾರೆ.
ಅಡ್ವಾಣಿಯವರ ಆತ್ಮಚರಿತ್ರೆಯಿರುವ ಅವರ ವೆಬ್‌ಸೈಟ್ 'ಮೈ ಕಂಟ್ರಿ ಮೈ ಲೈಫ್'ಗೆ ಪ್ರತಿ ತಿಂಗಳಲ್ಲಿ ಲಕ್ಷಾಂತರ ವೀಕ್ಷಕರು ಭೇಟಿ ನೀಡುತ್ತಿರುವ ಹಿಟ್‌ಗಳು ನಮಗೆ ಸಿಗುತ್ತಿವೆ. ಇದರಿಂದ ಸ್ಫೂರ್ತಿಗೊಂಡ ಪಕ್ಷ ಅಡ್ವಾಣಿಯವರಿಗಾಗಿಯೇ ಒಂದು ವೆಬ್‌ಸೈಟನ್ನು ರೂಪಿಸಲು ಯೋಜಿಸಿತು. ಅದರ ಜತೆಗೆ ಐಪಿಟಿವಿ ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎನ್ನುವುದು ಬೋರಾ ಅಭಿಪ್ರಾಯ.
ಬರಾಕ್ ಒಬಾಮಾ ಕೂಡ ಇಂತಹುದೇ ಮಾರ್ಗಗಳನ್ನು ಚುನಾವಣಾ ಪ್ರಚಾರ ಕಾರ್ಯಕ್ಕೆ ಬಳಸಿಕೊಂಡಿದ್ದರು. ಒಬಾಮಾ ಪಕ್ಷದಿಂದ ನಾಮಕರಣಗೊಳ್ಳುವ ಮೊದಲೇ ಅನೇಕ ತಂತ್ರಗಾರಿಗೆ ಬಳಸಿ ದೇಶಭಕ್ತಿಯ ಕಡೆ ಒತ್ತುಕೊಡುವಂತಹ ಪ್ರಚಾರ ಕಾರ್ಯ ಕೈಗೊಂಡಿದ್ದರು. ಅವರ ಪ್ರಚಾರ ಕಾರ್ಯಗಳನ್ನು ಬಿತ್ತರಿಸಲು ಟೀವಿ ಚಾನೆಲ್ ಒಂದು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿತ್ತು. ಅಷ್ಟೇ ಅಲ್ಲದೆ ಫೇಸ್‌ಬುಕ್, ಮೈಸ್ಪೇಸ್, ಬ್ಲಾಕ್‌ಪ್ಲಾನೆಟ್ ಮುಂತಾದ ಸಾಮಾಜಿಕ ಜಾಲಗಳನ್ನು ಮೊರೆ ಹೋಗಿ ಅಲ್ಲೂ ಪ್ರಚಾರ ಕೈಗೊಂಡಿದ್ದರು.
ಒಬಾಮ ತನ್ನ ಆತ್ಮಚರಿತ್ರೆಯ ಮೂಲಕ ಮತ್ತಷ್ಟು ಮೆರುಗು ಪಡೆದುಕೊಂಡಿದ್ದರು. ಈಗ ನಾಯಕನಾಗಿರುವ ಒಬ್ಬ ವ್ಯಕ್ತಿ ಈ ಹಿಂದೆ ಹೇಗಿದ್ದ, ಅವನ ಜೀವನದ ಹಾದಿಗಳು ಹೇಗಿದ್ದವು ಎಂಬುದನ್ನೆಲ್ಲ ಕಣ್ಣಿಗೆ ಕಟ್ಟುವಂತೆ ಅದರಲ್ಲಿ ವಿವರಿಸಲಾಗಿತ್ತು.
ಇಲ್ಲಿ ಹಲವು ಸಾಮ್ಯತೆಗಳು ಅಡ್ವಾಣಿ ಮತ್ತು ಒಬಾಮಾ ಅವರ ನಡುವೆ ಕಾಣಿಸುತ್ತಿವೆ. ಪ್ರಧಾನಿ ಪದದ ಅಭ್ಯರ್ಥಿ ಅಡ್ವಾಣಿಯವರ ಪ್ರಚಾರ ತಂತ್ರ ಹಾಗೂ ತನ್ನ ವ್ಯಕ್ತಿತ್ವವನ್ನು ಪ್ರಜ್ವಲಗೊಳಿಸಲು ಬಳಸುವ ಮಾರ್ಗಗಳು ಅದನ್ನು ಸ್ಪಷ್ಟಪಡಿಸುತ್ತಿವೆ. ಆದರೆ ಒಬಾಮಾ ಅವರು 2004ರಲ್ಲೂ ಇದೇ ಸಂಪ್ರದಾಯಗಳನ್ನು ಸ್ಪೂರ್ತಿಯಾಗಿರಿಸಿಕೊಂಡು ಶ್ರಮವಹಿಸಿದ್ದರು ಮತ್ತು ಈ ಹಿಂದೆ ಕೂಡ ಅವರು ಹೀಗೆಯೇ ಇದ್ದರು.
ಹಾಗಾದರೆ ಇಲ್ಲಿ ಯಾವುದು ಬಿಟ್ಟು ಹೋಗಿದೆ ಅಥವಾ ವ್ಯತ್ಯಾಸಗಳೇನು ಎಂದು ಹುಡುಕಿದಾಗ, ಒಬಾಮಾ ಅವರಿಗಿದ್ದಂತೆ ಅಡ್ವಾಣಿಯವರಿಗೆ ಈಗ ಯಾವುದೇ ಚುನಾವಣಾ ಪ್ರಚಾರದ ಹಾಡುಗಳು ಇನ್ನೂ ಬಂದಿಲ್ಲ. ಎದುರಾಳಿ ಪಕ್ಷದಿಂದ ಇಂತಹುದೇ ವೆಬ್‌ಸೈಟು ಮೂಲಕ ಪ್ರತಿದಾಳಿ ತಂತ್ರ ಆರಂಭವಾಗಿದೆ. ಮತ್ತೊಂದು ವಿಚಾರವೆಂದರೆ ನಮ್ಮಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿಗಳ ನಡುವೆ ಸಾರ್ವಜನಿಕ ಚರ್ಚೆಗಳು ನಡೆದಿಲ್ಲ ಮತ್ತು ನಡೆಯುವುದಿಲ್ಲ ! |