ನವದೆಹಲಿ: ದೆಹಲಿ ವಿಧಾನಸಭಾ ಶಾಸಕರ ಆಯ್ಕೆಗಾಗಿ ಮತದಾನ ನಡೆಯುತ್ತಿದ್ದು, ಮುಂಬೈ ಸ್ಫೋಟದ ಹಿನ್ನೆಲೆಯಲ್ಲಿ ಅತ್ಯಂತ ಬಿಗಿಭದ್ರತೆಯಲ್ಲಿ ಮತದಾನ ನಡೆಯುತ್ತಿದೆ.
ಸತತ ಮೂರನೆ ಬಾರಿ ಅಧಿಕಾರ ಹೊಂದುವ ಹಂಬಲದಲ್ಲಿರುವ ಕಾಂಗ್ರೆಸ್, ಬಿಜೆಪಿಯನ್ನು ಸೋಲಿಸುವ ತವಕದಲ್ಲಿದೆ. ಒಟ್ಟು 70 ಸ್ಥಾನಗಳ ದೆಹಲಿವಿಧಾನ ಸಭೆಯ 69 ಸ್ಥಾನಗಳ ಅಭ್ಯರ್ಥಿಗಳ ಆಯ್ಕೆಗಾಗಿ ಶನಿವಾರ ಮತದಾನ ನಡೆಯುತ್ತಿದೆ. ಉಳಿದ ಒಂದು ಸ್ಥಾನಕ್ಕೆ ಡಿಸೆಂಬರ್ 13ರಂದು ಮತದಾನ ನಡೆಯಲಿದೆ.
ಚುನಾವಣಾ ಪ್ರಚಾರದ ನಡುವೆಯೇ ರಾಜೇಂದ್ರ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುರಾನ್ ಚಂದ್ ಯೋಗಿ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಚುನಾವಣೆಯನ್ನು ಡಿಸೆಂಬರ್ 13ಕ್ಕೆ ಮುಂದೂಡಲಾಗಿದೆ.
ಮುಂಜಾನೆ ಎಂಟು ಗಂಟೆಗೆ ಮತದಾನ ಆರಂಭವಾಗಿದ್ದು, 10,993 ಮತಗಟ್ಟೆಗಳಲ್ಲಿ ದೆಹಲಿಯಾದ್ಯಂತ ಜನತೆ ತಮ್ಮ ಪರಮೋಚ್ಚ ಹಕ್ಕನ್ನು ಚಲಾಯಿಸುತ್ತಿದ್ದಾರೆ. 52 ಸಾವಿರ ಪೊಲೀಸ್ ಸಿಬ್ಬಂದಿಯನ್ನು ವಿವಿಧೆಡೆ ನಿಯೋಜಿಸಲಾಗಿದೆ ಎಂದು ದೆಹಲಿ ಚುನಾವಣಾ ಕಚೇರಿಯ ಮೂಲಗಳು ತಿಳಿಸಿವೆ.
46.98 ಲಕ್ಷ ಮಹಿಳೆಯರೂ ಸೇರಿದಂತೆ ಒಟ್ಟು 1,05,82,369 ಮತದಾರರು ಮತದಾನದ ಹಕ್ಕನ್ನ ಹೊಂದಿದ್ದಾರೆ. ಕಣದಲ್ಲಿ ಒಟ್ಟು 863 ಅಭ್ಯರ್ಥಿಗಳಿದ್ದಾರೆ.
ಹಾಲಿ ಮುಖ್ಯಮಂತ್ರಿ ಕಾಂಗ್ರೆಸ್‌ನ ಶೀಲಾದೀಕ್ಷಿತ್, ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ವಿ.ಕೆ.ಮಲ್ಹೋತ್ರ, ಸಚಿವರಾದ ಎ.ಕೆ.ವಾಲಿಯ, ಅರವಿಂದರ್ ಸಿಂಗ್ ಲೊವೆಲಿ, ಯೋಗಾನಂದ್ ಶಾಸ್ತ್ರಿ, ರಾಜ್‌ಕುಮಾರ್ ಚೌವ್ಹಾಣ್, ದೆಹಲಿ ಬಿಜೆಪಿ ಮುಖ್ಯಸ್ಥ ಹರ್ಷವರ್ಧನ್ ಮತ್ತು ವಿಪಕ್ಷ ನಾಯಕ ಜದೀಶ್ ಮುಖಿ ಅವರುಗಳು ಕಣದಲ್ಲಿರುವ ಪ್ರಮುಖರು.
|