ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ತೃತೀಯ ರಂಗ ರ‌್ಯಾಲಿಗೆ 2050 ಸರಕಾರಿ ಬಸ್ಸುಗಳು!
ಮತಸಮರ
ತುಮಕೂರು ಬಳಿಯ ದಾಬಸ್ ಪೇಟೆ ಬಳಿ ಅಧಿಕೃತವಾಗಿ ಜನ್ಮ ತಳೆಯುತ್ತಿರುವ ತೃತೀಯ ರಂಗ ಎಂಬ ಹೊಸ ರಾಜಕೀಯ ಶಕ್ತಿಯ ಉದಯಕ್ಕೆ, ಖಾಸಗಿ ಬಸ್ಸುಗಳು, ಲಾರಿಗಳು, ಕಾರುಗಳು ಮತ್ತಿತರ ವಾಹನಗಳ ಹೊರತಾಗಿ, 2050 ಸರಕಾರಿ ಬಸ್ಸುಗಳಲ್ಲಿ ಜನರು ಹರಿದುಬರಲಿದ್ದಾರೆ.

ಈ ಚುನಾವಣೆಗೆ ಸಂಬಂಧಿಸಿದ ರಾಜಕೀಯ ರ‌್ಯಾಲಿಗೆ ಸರಕಾರಿ ಬಸ್‌ಗಳನ್ನು ಪೂರೈಸುವ ಕುರಿತು ಈ ಹಿಂದೆ ವಿವಾದವೆದ್ದಿತ್ತು. ಸಮಾವೇಶದ ಆಯೋಜಕರು ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್ಸುಗಳಲ್ಲಿ ಅರ್ಧದಷ್ಟು ಬಸ್ಸುಗಳಿಗಾಗಿ ಬೇಡಿಕೆ ಮುಂದಿಟ್ಟಿದ್ದರು. ಆದರೆ ಅಷ್ಟು ಪೂರೈಸಿದರೆ ದೈನಂದಿನ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂದು ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಅಧಿಕಾರಿಗಳು ಆಯೋಜಕರಿಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಅಂದರೆ, ಕೆಎಸ್ಸಾರ್ಟಿಸಿ ಬಳಿ ಸುಮಾರು 6600 ಬಸ್ಸುಗಳಿವೆ ಮತ್ತು ಬಿಎಂಟಿಸಿ ಬಳಿ ಸುಮಾರು 5000 ಬಸ್ಸುಗಳಿವೆ. ಇವೆರಡರಿಂದ 5000 ಬಸ್ಸುಗಳಿಗೆ ಬೇಡಿಕೆ ಸಲ್ಲಿಸಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನೇತೃತ್ವದ ಜಾತ್ಯತೀತ ಜನತಾ ದಳ, ಆ ಬಳಿಕ ಬೇಡಿಕೆಯನ್ನು 3500ಕ್ಕೆ ತಗ್ಗಿಸಿತ್ತು. ಇದೀಗ ಅಧಿಕಾರಿಗಳು 1300 ಕೆಎಸ್ಸಾರ್ಟಿಸಿ ಹಾಗೂ ಬಿಎಂಟಿಸಿಯ 750 ಸೇರಿ ಒಟ್ಟು 2050 ಬಸ್ಸುಗಳನ್ನು ಈ ಸಮಾವೇಶಕ್ಕೆ ಒದಗಿಸಿದ್ದಾರೆ. ರ‌್ಯಾಲಿಯೊಂದಕ್ಕೆ ಸರಕಾರಿ ವಾಹನಗಳನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಬಳಸಲಾಗುತ್ತಿರುವುದು ಬಹುಶಃ ಇತಿಹಾಸದಲ್ಲೇ ಇದು ಮೊದಲು.

ರ‌್ಯಾಲಿಗೆ ಬಸ್‌ಗಳನ್ನು ಒದಗಿಸದಂತೆ 'ಮೇಲಿನವರ ಆದೇಶ' ಇರುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈಗಾಗಲೇ ಆರೋಪಿಸಿದ್ದಾರೆ. ರ‌್ಯಾಲಿಯ ಯಶಸ್ಸಿಗಾಗಿ ಜೆಡಿಎಸ್ ಪ್ರಯತ್ನಗಳಿಗೆ ಅಡ್ಡಿಪಡಿಸುವಂತೆ ಆಡಳಿತಾರೂಢ ಬಿಜೆಪಿ ಸರಕಾರವು ಸೂಚನೆ ನೀಡಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಜೆಪಿ ಆಯೋಜಿಸಿದ್ದ ಭಯೋತ್ಪಾದನಾ-ವಿರೋಧಿ ಆಂದೋಲನ ಸಮಾವೇಶಕ್ಕೆ ಸಾವಿರಾರು ಬಸ್ಸುಗಳನ್ನು ಬಳಸಲಾಗಿದೆ. ಅದು ಸರಕಾರಿ ಕಾರ್ಯಕ್ರಮವಾಗಿದ್ದುದರಿಂದ ಅದಕ್ಕೆ ಯಾವುದೇ ನಿರ್ಬಂಧಗಳಿರಲಿಲ್ಲ. ಸಾರಿಗೆ ಸಂಸ್ಥೆಗಳ ಪೂರ್ಣ ಸಹಕಾರ ಇಲ್ಲದಿದ್ದಾಗ್ಯೂ ರ‌್ಯಾಲಿಯನ್ನು ಹೇಗೆ ಯಶಸ್ವಿಗೊಳಿಸಬೇಕೆಂದು ಜೆಡಿಎಸ್‌ಗೆ ಗೊತ್ತಿದೆ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.

ಆದರೆ, ಕುಮಾರಸ್ವಾಮಿ ಆರೋಪಗಳನ್ನು ತಳ್ಳಿಹಾಕಿರುವ ಸಾರಿಗೆ ಸಚಿವ ಆರ್.ಅಶೋಕ್, ಭಯೋತ್ಪಾದನಾ ವಿರೋಧಿ ಆಂದೋಲನಕ್ಕೆ ಬಳಸಿದ್ದು ಕೇವಲ 1600 ಬಸ್ಸುಗಳನ್ನು. ಬೇಡಿಕೆ ಬಂದಾಗ ಬಸ್ ಒದಗಿಸಿದಲ್ಲಿ ಸಾರಿಗೆ ಸಂಸ್ಥೆಗಳಿಗೇ ಲಾಭವಾಗುತ್ತದೆ. ಆದರೆ ಜೆಡಿಎಸ್ ಬೇಡಿದಷ್ಟು ಬಸ್ ಪೂರೈಸಿದರೆ ದೈನಂದಿನ ಸಾರಿಗೆ ಸಂಚಾರಕ್ಕೆ ಧಕ್ಕೆಯಾಗಿ ಜನಸಾಮಾನ್ಯರು ತೊಂದರೆಗೀಡಾಗುತ್ತಾರೆ. ಹೀಗಾಗಿ ನಮ್ಮಿಂದ ಸಾಧ್ಯವಾದಷ್ಟು ಬಸ್ಸುಗಳನ್ನು ಒದಗಿಸಿದ್ದೇವೆ ಎಂದಿದ್ದಾರೆ ಅಶೋಕ್.

ಈ ಬಸ್ಸುಗಳಿಗಾಗಿ ಜೆಡಿಎಸ್ ಸುಮಾರು 2.5 ಕೋಟಿ ರೂ.ಗಳನ್ನು ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿಗೆ ನೀಡುತ್ತದೆ ಎಂದು ಮೂಲಗಳು ತಿಳಿಸಿವೆ.