ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಈ ಹಿರಿ ಜೀವಗಳು ಮುಂದಿನ ಲೋಕಸಭೆಯಲ್ಲಿಲ್ಲ!
ಮತಸಮರ
ಮುಂದಿನ ಲೋಕಸಭೆಯಲ್ಲಿ ಎರಡು ಹಿರಿಯ ಜೀವಗಳ ಉಪಸ್ಥಿತಿ ಇಲ್ಲದೆ ಕಳಾಹೀನವಾಗಲಿದೆ. ಅವರೆಂದರೆ ಅಟಲ್ ಬಿಹಾರಿ ವಾಜಪೇಯಿ ಹಾಗೂ ಸೋಮನಾಥ್ ಚಟರ್ಜಿ.

ಭಾರತದ 40 ವರ್ಷದ ಸಂಸತ್ತಿನಲ್ಲಿ ಅಪಾರ ಅನುಭವ ಹೊಂದಿರುವ ಎರಡು ಹಿರಿಯ ತಲೆಗಳು ಅಂದರೆ ಇವರಿಬ್ಬರೇ. ಎಲ್ಲರ ನಿರೀಕ್ಷೆಯಂತೆ ಬಿಜೆಪಿಯ ಧುರೀಣ ವಾಜಪೇಯಿ ಹಾಗೂ ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಆ ಮೂಲಕ ಹಿರಿಯ ಅನುಭವಿಗಳಿಬ್ಬರನ್ನು ಈ ಬಾರಿಯ ಲೋಕಸಭೆ ಕಳೆದುಕೊಳ್ಳಲಿದೆ.

PTI
ಅನಾರೋಗ್ಯದ ಕಾರಣದಿಂದ ವಾಜಪೇಯಿ ಈ ಬಾರಿಯ ಚುನಾವಣೆಯಿಂದ ದೂರ ಉಳಿದಿದ್ದರೆ, ಸೋಮನಾಥ ಚಟರ್ಜಿ ಸಿಪಿಐ(ಎಂ) ಜತೆಗಿನ ವಿರಸದಿಂದ ಈ ಮೊದಲೇ ಸಕ್ರಿಯ ರಾಜಕಾರಣದಿಂದ ಹೊರಗುಳಿಯುವುದಾಗಿ ತಿಳಿಸಿದ್ದರು.

ವಾಜಪೇಯಿ 1957ರಲ್ಲಿ ಮೊದಲ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. ಅದು ಸ್ವತಂತ್ರ ಭಾರತದ ಎರಡನೆಯ ಲೋಕಸಭೆಯಾಗಿತ್ತು. ಹೀಗಾಗಿ ವಾಜಪೇಯಿ ಅವರು ಲೋಕಸಭಾ ಸದಸ್ಯರಾಗಿ 40 ವರ್ಷಗಳೇ ಸಂದಿವೆ. ಆದರೂ, ಮೂರು (1962), ಎಂಟು (1984) ಹಾಗೂ ಒಂಭತ್ತನೇ(1989) ಲೋಕಸಭೆ ಇವರ ಪಾಲಿಗೆ ದಕ್ಕಲಿಲ್ಲ.

ಇನ್ನು ಸೋಮನಾಥ ಚಟರ್ಜಿಯವರ ರಾಜಕೀಯ ಇತಿಹಾಸ ಇನ್ನೂ ಇಂಟರೆಸ್ಟಿಂಗ್ ಆಗಿದೆ. ಅವರು 1971ರಿಂದ ಈವರೆಗೆ ಒಂದೇ ಒಂದು ಲೋಕಸಭಾ ಚುನಾವಣೆಯಿಂದಲೂ ತಪ್ಪಿಸಿಕೊಂಡಿಲ್ಲ. 38 ವರ್ಷಗಳ ಕಾಲ ಜನರ ಲೋಕಸಭಾ ಪ್ರತಿನಿಧಿಯಾಗಿ ಆಯ್ಕೆಯಾಗುತ್ತಲೇ ಬಂದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚುನಾಯಿತರಾದರೆ ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಹಾಗೂ ಕಾಂಗ್ರೆಸ್‌ನ ಗಿರಿಧರ್ ಗಮಂಗ್ ಅವರು ವಾಜಪೇಯಿ ಹಾಗೂ ಚಟರ್ಜಿ ಅವರ ನಂತರದ ಲೋಕಸಭೆಯಲ್ಲಿ ಅನುಭವ ಹೊಂದಿದ ಹಿರಿಯ ಜೀವಗಳಾಗುತ್ತವೆ.

PTI
543 ಸಂಸದರ ಪೈಕಿ 71 ಮಂದಿ ಈವರೆಗೆ ಲೋಕಸಭೆಗೆ ಐದು ಹಾಗೂ ಅದಕ್ಕಿಂತಲೂ ಹೆಚ್ಚು ಬಾರಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನ 150 ಸಂಸದರ ಪೈಕಿ 23 ಮಂದಿ ಸಂಸದರು ಐದಕ್ಕಿಂತ ಹೆಚ್ಚು ಬಾರಿ ಆಯ್ಕೆಯಾಗಿದ್ದಾರಲ್ಲದೆ, ಅವರಲ್ಲಿ ಮೂರನೇ ಒಂದು ಭಾಗ ಸಂಸದರು ಕಾನೂನು ಪಾರಂಗತರು. ಕಾಂಗ್ರೆಸ್‌ನ ಎಂ.ಎಚ್.ಗವಿತ್ ಎಂಟು ಬಾರಿ, ಕಮಲ್‌ನಾಥ್, ಸಂತೋಷ್ ಮೋಹನ್ ದೇವ್ ಹಾಗೂ ಸತ್ಯನಾರಾಯಣ ಜತಿಯಾ ಏಳು ಬಾರಿ, ಪಿ.ಚಿದಂಬರಂ ಆರು ಬಾರಿ ಹಾಗೂ ಪಿ.ಆರ್.ದಾಸ್‌ಮುನ್ಶಿ ಐದು ಬಾರಿ ಲೋಕಸಭೆಗೆ ಆಯ್ಕೆಯಾದ ಹಿರಿಯರು.

ಬಿಜೆಪಿಯ 15 ಸಂಸದರು ಐದಕ್ಕೂ ಹೆಚ್ಚು ಬಾರಿ ಆಯ್ಕೆಯಾದರೆ, ಸಿಪಿಐ(ಎಂ)ನ ಎಂಟು ಸಂಸದರು ಲೋಕಸಭೆಗೆ ಐದಕ್ಕೂ ಹೆಚ್ಚು ಬಾರಿ ಆಯ್ಕೆಯಾಗಿದ್ದರು. ಬಿಜೆಪಿಯ ಪೈಕಿ ಸುಮಿತ್ರಾ ಮಹಾಜನ್ ಹಾಗೂ ಕಾಶಿರಾಮ್‌ರಾಣಾ ಆರು ಬಾರಿ ಆಯ್ಕೆಯಾಗಿದ್ದರೆ, ಎಲ್.ಕೆ.ಅಡ್ವಾಣಿ ಹಾಗೂ ಮೇನಕಾ ಗಾಂಧಿ ಐದು ಬಾರಿ ಆಯ್ಕೆಯಾಗಿದ್ದರು.

ಸಿಪಿಐ(ಎಂ)ನ ಬಸುದೇಬ್ ಆಚಾರ್ಯ ಹಾಗೂ ಹನ್ನನ್ ಮೊಲ್ಲಾಹ್ ಎಂಟು ಬಾರಿ ಆಯ್ಕೆಯಾದರೆ, ಅನಿಲ್ ಬಸು ಏಳು ಬಾರಿ ಆಯ್ಕೆಯಾಗಿದ್ದಾರೆ. ಸಿಪಿಐ(ಎಂ)ನ ಎಂಟು ಎಂಪಿಗಳ ಪೈಕಿ ಸೋಮನಾಥ ಚಟರ್ಜಿಯವರೂ ಸೇರಿದೆ. ಕಳೆದ ವರ್ಷ ಬಹುಮತ ಸಾಬೀತಿನ ಸಮಯದಲ್ಲಿ ಪಕ್ಷದ ನಿಯಮಗಳನ್ನು ಗಾಳಿಗೆ ತೂರಲು ತಯಾರಿರದ ಕಾರಣ ಚಟರ್ಜಿ ಅವರನ್ನು ಸಿಪಿಐ(ಎಂ)ನಿಂದ ವಿಸರ್ಜಿಸಲಾಗಿತ್ತು. ಇನ್ನೊಬ್ಬ ಎಂಪಿ ಬಸು ಅವರ ಹೆಸರು ಸದ್ಯಕ್ಕೆ ಪಕ್ಷದ ಚುನಾವಣಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಾಣುತ್ತಿಲ್ಲವಾದ್ದರಿಂದ ಎಂಟು ಹಿರಿಯರಲ್ಲಿ ಆರು ಮಂದಿ ಮಾತ್ರ ಸಿಪಿಐ(ಎಂ)ನಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದೆ.