ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ತೃತೀಯ ರಂಗ: 'ರಾಜಕೀಯದ ಅತಿದೊಡ್ಡ ಮರೀಚಿಕೆ'
ಮತಸಮರ
ಗುರುವಾರವಷ್ಟೇ ಅಧಿಕೃತತೆ ಪಡೆದುಕೊಂಡಿರುವ ಒಂಬತ್ತು ಪಕ್ಷಗಳ ಒಕ್ಕೂಟ 'ತೃತೀಯ ರಂಗ'ವು ಭಾರತೀಯ ರಾಜಕಾರಣದ ಅತಿದೊಡ್ಡ ಮರೀಚಿಕೆ ಎಂದು ಕಾಂಗ್ರೆಸ್ ಬಣ್ಣಿಸಿದ್ದರೆ, ಚುನಾವಣೆ ಫಲಿತಾಂಶ ಹೊರಬಿದ್ದ ಕ್ಷಣದಲ್ಲೇ ಅದು ನುಚ್ಚುನೂರಾಗಲಿದೆ ಎಂದು ಬಿಜೆಪಿ ವರ್ಣಿಸಿದೆ.

ಯಾವುದೇ ತತ್ವ ಸಿದ್ಧಾಂತಗಳಿಲ್ಲದ ಮತ್ತು ಸಮರ್ಥ ನಾಯಕನಿಲ್ಲದ ಒಕ್ಕೂಟವು ಹೆಚ್ಚು ಕಾಲ ಬಾಳುವುದಿಲ್ಲ. ಅಷ್ಟು ಮಾತ್ರವಲ್ಲ, ಭಾರತದಂತಹ ದ್ವಿಪಕ್ಷೀಯ ರಾಜಕಾರಣದಲ್ಲಿ ಅದಕ್ಕೆ ಯಾವುದೇ ಅವಕಾಶವೂ ಇರುವುದಿಲ್ಲ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವ್ಡೇಕರ್ ಟೀಕಿಸಿದ್ದು, ಚುನಾವಣೆ ಐದು ಹಂತಗಳಲ್ಲಿ ನಡೆಯಲಿದ್ದು, ಫಲಿತಾಂಶ ಹೊರಬಿದ್ದ ಬಳಿಕ ಆರನೇ ಹಂತವೇ ದೇಶದ ಭವಿಷ್ಯ ನಿರ್ಣಯಿಸಲಿದೆ. ಈ ಹಂತದಲ್ಲಿ ರಾಜಕೀಯ ಪಕ್ಷಗಳ ಧ್ರುವೀಕರಣ ನಡೆಯಲಿದೆ ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ನೇತೃತ್ವದ ಎನ್‌ಡಿಎಗೆ ಕೂಡ ಸ್ವಂತ ಬಲದಲ್ಲಿ ಅಧಿಕಾರಕ್ಕೇರುವ ವಿಶ್ವಾಸವಿಲ್ಲ ಎಂಬುದನ್ನು ಸೂಚ್ಯವಾಗಿ ತಿಳಿಸಿದರು.

ಇನ್ನೊಂದೆಡೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ, ತೃತೀಯ ರಂಗ ಎಂಬುದು ಅತಿದೊಡ್ಡ ಮರೀಚಿಕೆಯಾಗಲಿದೆ. ಯಾವಾಗೆಲ್ಲ ಈ ರೀತಿಯ ಗುಂಪುಗಾರಿಕೆಗಳು ಸಂಭವಿಸಿದವೋ, ಆವಾಗೆಲ್ಲ ಕೋಮುವಾದಿ ಶಕ್ತಿಗಳಿಗೆ ಹೆಚ್ಚು ಪ್ರಯೋಜನಗಳಾದವು ಎಂದು ಹೇಳಿದರು.

ತುಮಕೂರು ಬಳಿಯ ದಾಬಸ್‌ಪೇಟೆ ಬಳಿ ಎಡಪಕ್ಷಗಳು, ಜೆಡಿಎಸ್ ಮತ್ತಿತರ ಪಕ್ಷಗಳು ಸೇರಿಕೊಂಡು ತೃತೀಯ ಶಕ್ತಿಗೆ ಅಧಿಕೃತ ಚಾಲನೆ ನೀಡಿದ ಕೆಲವೇ ಗಂಟೆಗಳಲ್ಲಿ ಪ್ರಧಾನ ರಾಜಕೀಯ ಪಕ್ಷಗಳಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಈ ಹೇಳಿಕೆ ಹೊರಬಿದ್ದಿವೆ.

1998ರಿಂದೀಚೆಗೆ, ಜಾತ್ಯತೀತ ಮತ್ತು ಕೋಮು ಶಕ್ತಿಗಳ ನಡುವೆ ಧ್ರುವೀಕರಣ ಆಗುತ್ತಲೇ ಬಂದಿದೆ. ಇದಕ್ಕೆ ಕಾರಣ 1996ರಿಂದ 1998ರವರೆಗೆ ಆಳಿದ ತೃತೀಯ ರಂಗ ಸರಕಾರ ಎಂದ ತಿವಾರಿ, ತೃತೀಯ ರಂಗ ಎಂಬುದು ಕೇವಲ ಪ್ರಾದೇಶಿಕ ಪಕ್ಷಗಳ ಕಲಸುಮೇಲೋಗರವಷ್ಟೆ ಎಂದು ಅಭಿಪ್ರಾಯಪಟ್ಟರು.