ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಎಡ, ಪ್ರಾದೇಶಿಕ ಪಕ್ಷಗಳಿಂದ 'ತೃತೀಯ ಶಕ್ತಿ'ಗೆ ಚಾಲನೆ
ಮತಸಮರ
ಜನತೆಯ ನೋವುಗಳಿಗೆ ಸ್ಪಂದಿಸಲು ವಿಫಲವಾಗಿರುವ ಕಾಂಗ್ರೆಸ್ ಹಾಗೂ ಬಿಜೆಪಿಗಳನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಿಂದಿಕ್ಕುವ ಉದ್ದೇಶದಿಂದ ಎಡಪಕ್ಷಗಳು ಮತ್ತು ಪ್ರಮುಖ ಪ್ರಾದೇಶಿಕ ಪಕ್ಷಗಳು ಕೈಜೋಡಿಸಿದ್ದು ತೃತೀಯ ಶಕ್ತಿಗೆ ಔಪಚಾರಿಕ ಚಾಲನೆ ನೀಡಿವೆ.

ಲೋಕಸಭಾ ಚುನಾವಣೆಗಳಲ್ಲಿ ಮತದಾರರಿಗೆ 'ಹೊಸ ಪರ್ಯಾಯ' ಒಂದನ್ನು ಒದಗಿಸುವ ಉದ್ದೇಶದಿಂದ ತಾವೆಲ್ಲ ಒಂದಾಗಿದ್ದೇವೆ ಎಂದು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಪ್ರಮುಖ ನಾಯಕರು ನುಡಿದರು.

ಎಲ್ಲಾ ಪ್ರಜಾತಾಂತ್ರಿಕ ಮತ್ತು ಜಾತ್ಯತೀತ ಹಾಗೂ ಎಡಪಕ್ಷಗಳು ರಾಷ್ಟ್ರದಲ್ಲಿ ತೃತೀಯ ಶಕ್ತಿಯನ್ನು ಹುಟ್ಟುಹಾಕಲು ಒಂದಾಗಿರುವ ಐತಿಹಾಸಿಕ ಕ್ಷಣವಿದು ಎಂಬುದಾಗಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಹೇಳಿದ್ದಾರೆ. ಕೋಮುವಾದಿ ಶಕ್ತಿಗಳ ವಿರುದ್ಧ ದೃಢವಾಗಿ ಜಾತ್ಯತೀತ ತಡೆಯನ್ನು ಒಡ್ಡುವ ಸಲುವಾಗಿ ಅಪಾರ ಜನತೆಯ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ತೃತೀಯ ಶಕ್ತಿ ಎದ್ದು ನಿಂತಿದೆ ಎಂದು ಅವರು ನುಡಿದರು.

ತುಮಕೂರಿನ ದಾಬಾಸ್‌‌ಪೇಟೆಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಒಂಬತ್ತು ಪಕ್ಷಗಳು ಒಟ್ಟಾಗಿದ್ದು ತಾವು ರಾಷ್ಟ್ರಕ್ಕೆ ಒಂದು ಸ್ಥಿರ ಸರ್ಕಾರವನ್ನು ನೀಡಲು ಮುಂದಾಗಿರುವುದಾಗಿ ಹೇಳಿದವು. ಬಿಎಸ್‌ಪಿ, ಎಐಎಡಿಎಂಕೆ, ತೆಲಂಗಾಣ ರಾಷ್ಟ್ರಸಮಿತಿ, ಕ್ರಾಂತಿಕಾರಿ ಸಮಾಜವಾದಿ ಪಕ್ಷ, ಫಾರ್ವರ್ಡ್ ಬ್ಲಾಕ್ ಪಕ್ಷಗಳು ತಮ್ಮ ಪ್ರತಿನಿಧಿಗಳನ್ನು ಮಾತ್ರ ಕಳುಹಿಸಿವೆ.

ಸ್ವಾತಂತ್ರ್ಯಾ ನಂತರದ 60 ವರ್ಷಗಳ ಅವಧಿಯಲ್ಲಿ 230ದಶಲಕ್ಷ ಮಂದಿ ಬಡತನದಲ್ಲಿ ಬಳಲುತ್ತಿದ್ದು, ಮೂರು ವರ್ಷದೊಳಗಿನ ಶೇ.40ರಷ್ಟು ಮಕ್ಕಳು ಸೂಕ್ತ ಆಹಾರವಿಲ್ಲದೆ ಬಳಲುತ್ತಿದ್ದಾರೆ. ಶೇ.50ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಮತ್ತು ಶೇ.39ರಷ್ಟು ಜನತೆ ಇನ್ನೂ ಅನಕ್ಷರಸ್ಥರಾಗಿದ್ದಾರೆ ಎಂದು ಕಾರಟ್ ನುಡಿದರು.

ಸಮಾವೇಶದಲ್ಲಿ ಮಾತನಾಡಿದ ಎಲ್ಲಾ ನಾಯಕರು ಎನ್‌ಡಿಎ ಹಾಗೂ ಯಿಪಿಎ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪ್ರಧಾನಿ ಆಕಾಂಕ್ಷಿ ಅಲ್ಲ : ದೇವೇಗೌಡ
ಇದೇ ವೇಳೆ ತೃತೀಯ ರಂಗ ಅಧಿಕಾರಕ್ಕೆ ಬಂದರೆ ತಾನು ಪ್ರಧಾನಿ ಆಕಾಂಕ್ಷಿ ಅಲ್ಲ ಎಂಬುದಾಗಿ ಜೆಡಿಎಸ್ ವರಿಷ್ಠ ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ಅವರು ಸಮಾವೇಶಕ್ಕೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ದುರಾಡಳಿತಕ್ಕೆ ಪರ್ಯಾಯವಾಗಿ ತೃತೀಯ ಶಕ್ತಿಯನ್ನು ಅಧಿಕಾರಕ್ಕೆ ತರುವುದೇ ತನ್ನ ಧ್ಯೇಯೋದ್ದೇಶವಾಗಿದೆಯೇ ಹೊರತು ತನಗೆ ಪಟ್ಟ ಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ.

ಆದರೆ, ತೃತೀಯ ರಂಗದ ಪ್ರಧಾನಿ ಅಭ್ಯರ್ಥಿ ಎಂಬುದಾಗಿ ಹೇಳಲಾಗುತ್ತಿರುವ ಮಾಯಾವತಿ ಸಮಾವೇಶದಲ್ಲಿ ಭಾಗವಹಿಸಿಲ್ಲ. ಬದಲಿಗೆ ತನ್ನ ಪ್ರತಿನಿಧಿಯಾಗಿ ಪಕ್ಷದ ಹಿರಿಯ ನಾಯಕ ಸತೀಶ್ ಮಿಶ್ರಾ ಅವರನ್ನು ಕಳುಹಿಸಿದ್ದಾರೆ.