ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಕಿಂಗ್ ಮೇಕರ್ ಪಾತ್ರಕ್ಕೆ ಸಜ್ಜಾಗುತ್ತಿವೆ ಪ್ರಾದೇಶಿಕ ಪಕ್ಷಗಳು
ಮತಸಮರ
WD
ಲೋಕಸಭೆ ಚುನಾವಣೆಗೆ ನಾವು ಸಿದ್ಧ ಎಂದು ಯಾವುದೇ ಪಕ್ಷಗಳು ಘೋಷಿಸಿಕೊಂಡಿದ್ದರೂ, ಚುನಾವಣೆ ಘೋಷಣೆಯಾದ ಬಳಿಕ ಒಂದು ರೀತಿಯ ತಳಮಳ ಎಲ್ಲ ರಾಜಕೀಯ ಪಕ್ಷಗಳಲ್ಲೂ ಇವೆ. ಮತದಾರರ ಮೇಲಿನ ಹಿಡಿತವನ್ನು ಕಾಯ್ದುಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದರೆ, ದೇಶದ ಅತ್ಯಂತ ಹಳೆಯ ಪಕ್ಷವನ್ನು ಏಕಾಂಗಿಯಾಗಿ ಸೋಲಿಸುವ ಸ್ಥಿತಿಯಲ್ಲಿ ಯಾವುದೇ ರಾಜಕೀಯ ಪಕ್ಷಗಳೂ ಇಲ್ಲದಿರುವುದರೊಂದಿಗೆ, ದೇಶಾದ್ಯಂತ ಪ್ರಾದೇಶಿಕ ಪಕ್ಷಗಳು ಈ ರಾಜಕೀಯ ನಿರ್ವಾತವನ್ನು ತುಂಬುವತ್ತ ತಮ್ಮ ಚಿತ್ತ ಹರಿಸಿವೆ.

ಬಹಿರಂಗವಾಗಿ ಯಾರನ್ನೇ ಕೇಳಿದರೂ ಈ ಪ್ರಾದೇಶಿಕ ಪಕ್ಷಗಳ ಬಗ್ಗೆ ಎರಡು ಪ್ರಧಾನ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ತಾತ್ಸಾರ ಭಾವನೆ ಇರುತ್ತದೆ. ಆದರೆ ಒಳಗಿಂದೊಳಗೆ, ಅವುಗಳಿಗಿರುವ ಹಿಡಿತದ ಬಗ್ಗೆ ಆತಂಕವೂ ಇರುತ್ತದೆ. ಇದೇ ಕಾರಣಕ್ಕೆ ಅವುಗಳು ಚುನಾವಣೆ ಕಾಲದಲ್ಲಿ ಸ್ಥಾನ ಹೊಂದಾಣಿಕೆಗಾಗಿಯೋ ಅಥವಾ ಚುನಾವಣೋತ್ತರ ಕಾಲದಲ್ಲಿ ಆಕರ್ಷಕವಾದ ಸಂಪುಟ ದರ್ಜೆಯ ಹುದ್ದೆಗಳ ಮೂಲಕವೋ ಅವುಗಳನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತದೆ. ಇದು ಭಾರತೀಯ ರಾಜಕಾರಣ ಕಂಡ ಇತಿಹಾಸ.

ಹೀಗಾಗಿ ನಮ್ಮ ದೇಶದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಉಳಿಗಾಲವಿದೆ ಎನ್ನಲಡ್ಡಿಯಿಲ್ಲ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಕಳೆದ 13 ವರ್ಷಗಳಲ್ಲಿ ಹೆಚ್ಚಿನ ಪ್ರಾದೇಶಿಕ ಪಕ್ಷಗಳು ಒಂದಲ್ಲ ಒಂದು ಅವಧಿಯಲ್ಲಿ, ಒಂದೋ ಕಾಂಗ್ರೆಸ್ ಇಲ್ಲವೇ ಬಿಜೆಪಿ ಜೊತೆ ಸೇರಿಕೊಂಡು ಅಧಿಕಾರವನ್ನು ಅನುಭವಿಸಿವೆ.

ಇತ್ತೀಚೆಗಷ್ಟೇ ಆರು ಪ್ರಾದೇಶಿಕ ಪಕ್ಷಗಳು ಮತ್ತು ಎಡ ರಂಗ ಸೇರಿಕೊಂಡು ತೃತೀಯ ರಂಗವನ್ನು ಸ್ಥಾಪಿಸಿಕೊಂಡಿವೆ. ದೇಶದ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ 1996ರ ಸ್ಥಿತಿಯೇ ಪುನರಾವರ್ತನೆಯಾಗಬಹುದು ಎಂಬುದು ಅವುಗಳ ದೂರಾಲೋಚನೆ. ಅಂದರೆ 1996ರಲ್ಲಿ ಬಿಜೆಪಿಯು ಏಕೈಕ ಅತಿದೊಡ್ಡ ಪಕ್ಷವಾಗಿ ಮೂಡಿಬಂದಿದ್ದರೂ, 545 ಸದಸ್ಯಬಲದ ಸಂಸತ್ತಿನಲ್ಲಿ ಬಹುಮತ ಗಿಟ್ಟಿಸಿಕೊಳ್ಳಲಾಗಿರಲಿಲ್ಲ. ಆಗ ಪ್ರಾದೇಶಿಕ ಪಕ್ಷಗಳೇ ಸಹಾಯಕ್ಕೆ ಬಂದಿದ್ದು.

1996ರಲ್ಲಿ ಕಮ್ಯೂನಿಸ್ಟರು ಮತ್ತು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ಗಿಂತಲೂ ಅಧಿಕ ಸ್ಥಾನಗಳನ್ನು ಪಡೆದುಕೊಂಡಿರುವುದರೊಂದಿಗೆ, ಸಮಾನ ವೈರಿಯಾದ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಅವುಗಳ ನೇತೃತ್ವದ ಸರಕಾರಕ್ಕೆ ಕಾಂಗ್ರೆಸ್ ಬೆಂಬಲ ನೀಡಬೇಕಾಗಿಬಂದಿತ್ತು. ಸಂಯುಕ್ತ ರಂಗ ಎಂಬ ವೇದಿಕೆಯಡಿ ಒಟ್ಟು ಸೇರಿದ 13 ಪ್ರಾದೇಶಿಕ ಪಕ್ಷಗಳಲ್ಲಿ ಜನತಾ ದಳ, ತೆಲುಗು ದೇಶಂ, ಸಮಾಜವಾದಿ ಪಕ್ಷ, ಡಿಎಂಕೆ, ತಮಿಳು ಮಾನಿಲ ಕಾಂಗ್ರೆಸ್, ಅಸೋಮ್ ಗಣ ಪರಿಷದ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಅಂತಹ ಪ್ರಬಲ ಪ್ರಾದೇಶಿಕ ಪಕ್ಷಗಳಿದ್ದವು.

ಎಲ್ಲರ ಅಚ್ಚರಿಗೆ ಕಾರಣವಾಗಿದ್ದೆಂದರೆ ಅದು ಇವುಗಳೆಲ್ಲ ಸೇರಿಕೊಂಡು ಕರ್ನಾಟಕದ ಜನತಾ ದಳ ಮುಖಂಡರಾಗಿದ್ದ ಎಚ್.ಡಿ.ದೇವೇಗೌಡರನ್ನು ಪ್ರಧಾನಿ ಹುದ್ದೆಗೆ ಆರಿಸಿದ್ದು. ಅವರಾಗ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದರು.

ಆದರೆ, ಕೇವಲ ಹತ್ತು ತಿಂಗಳೊಳಗೆ ಕಾಂಗ್ರೆಸ್ ಪಕ್ಷವು ಬೆಂಬಲ ಹಿಂತೆಗೆದುಕೊಂಡಾಗ ದೇವೇಗೌಡರು ಪದತ್ಯಾಗ ಮಾಡಿದರು. ಆ ಬಳಿಕ ಸಂಯುಕ್ತರಂಗವು ಇಂದ್ರ ಕುಮಾರ್ ಗುಜ್ರಾಲ್ ಅವರನ್ನು ಆರಿಸಿತು. ಅವರು ಕೂಡ ಹೆಚ್ಚು ಕಾಲ ಉಳಿಯಲಿಲ್ಲ.

1999ರ ಚುನಾವಣೆಗಳ ಬಳಿಕ ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಡಿಎಂಕೆ ಮತ್ತು ತೆಲುಗು ದೇಶಂ, ಬಿಜೆಪಿ ನೇತೃತ್ವದ ಸರಕಾರಕ್ಕೆ ಊರುಗೋಲಾದವು. ಡಿಎಂಕೆಯು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರವನ್ನು ಸೇರಿಕೊಂಡರೆ, ತೆಲುಗು ದೇಶಂ ಹೊರಗಿನಿಂದ ಬೆಂಬಲ ನೀಡಿತು.

ಅದೇ ಹೊತ್ತಿಗೆ, ಆರಂಭದಿಂದಲೇ ವಿದಳನೆಯಾಗುತ್ತಲೇ ಇದ್ದ ಜನತಾ ದಳವು ಮತ್ತೆ ಹೋಳಾಯಿತು. ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಜನತಾ ದಳ ಸಂಯುಕ್ತ, ಜನತಾ ದಳ ಜಾತ್ಯತೀತ ಮತ್ತು ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ಎಂಬಿತ್ಯಾದಿಯಾಗಿ ಹೋಳಾಗಿ ಹೋಯಿತು. ಇವುಗಳಲ್ಲಿ ಜನತಾ ದಳ ಎಸ್ ಕರ್ನಾಟಕದಲ್ಲಿ ಪ್ರಾಬಲ್ಯ ಸ್ಥಾಪಿಸಿಕೊಂಡರೆ, ಉಳಿದೆಲ್ಲ ಪಾರ್ಟಿಗಳು ಬಿಹಾರದಲ್ಲಿ ಗುದ್ದಾಡತೊಡಗಿದವು ಅಥವಾ ಮೆರೆಯತೊಡಗಿದವು.

ಆರ್‌ಜೆಡಿ ಮತ್ತು ಎಲ್‌ಜೆಪಿಗಳು ಆ ಬಳಿಕ ಕಾಂಗ್ರೆಸ್ ಜೊತೆ ಹೋದರೆ, ಜೆಡಿಯು (ಸಂಯುಕ್ತ ಜನತಾ ದಳ) ಬಿಜೆಪಿ ಜೊತೆ ಸೇರಿಕೊಂಡಿತು. ಜೆಡಿಎಸ್ ಆ ಬಳಿಕ ಬಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ಬೆಂಬಲಿಸಿತಾದರೂ,, ಭಾರತ-ಅಮೆರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿ ಎಡಪಕ್ಷಗಳೊಂದಿಗೆ ಸೇರಿಕೊಂಡು ಯುಪಿಎಯನ್ನು ವಿರೋಧಿಸಿತು.

ಕರ್ನಾಟಕದಲ್ಲಿ 2004ರಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾದಾಗ ಮೊದಲು ಕಾಂಗ್ರೆಸ್ ಜೊತೆ ಹಾಗೂ ಬಳಿಕ 2006ರಲ್ಲಿ ಬಿಜೆಪಿ ಜೊತೆ ಸೇರಿಕೊಂಡ ಜೆಡಿಎಸ್, ಅಧಿಕಾರ ಅನುಭವಿಸಿತು.

ಎರಡು ರಾಷ್ಟ್ರೀಯ ಪಕ್ಷಗಳನ್ನು ಬಹಿರಂಗವಾಗಿ ದೂಷಿಸುತ್ತಾ ಇದ್ದರೂ, ಈ ಪ್ರಾದೇಶಿಕ ಪಕ್ಷಗಳು ಅವುಗಳನ್ನೇ ಬೆದರಿಸುತ್ತಾ, ಅವುಗಳೊಂದಿಗೆ ಸುಲಭವಾಗಿ ಸೀಟು ಹೊಂದಾಣಿಕೆ ಮಾಡಿಕೊಳ್ಳುವ ರೀತಿಯಿಂದಾಗಿ, ಅವುಗಳು ಮಾಡಿಕೊಳ್ಳುವ ಮೈತ್ರಿಯು ಸ್ಥಿರತೆ ತಂದೊಡ್ಡಲಾರದು ಎಂಬ ಆತಂಕಕ್ಕೆ ಕಾರಣವಾಗುತ್ತಿರುತ್ತದೆ.

ಆದರೆ ಈ ಪ್ರಾದೇಶಿಕ ಪಕ್ಷಗಳಿಗಿರುವ ಹಿಡಿತವಿದೆಯಲ್ಲ, ಇದರಿಂದಾಗಿ ಅವುಗಳು ಕಾಂಗ್ರೆಸ್ ಅಥವಾ ಬಿಜೆಪಿ ಸರಕಾರವನ್ನೇ ಉರುಳಿಸಬಲ್ಲಷ್ಟು ಸಾಮರ್ಥ್ಯ ಹೊಂದಿರುವುದು ಮಾತ್ರ ಸುಳ್ಳಲ್ಲ.

ಹೆಚ್ಚಿನ ಪ್ರಾದೇಶಿಕ ಪಕ್ಷಗಳು ಒಂದು ಕುಟುಂಬದ ಒಡೆತನದಲ್ಲಿರುತ್ತವೆ, ಆದರೆ ಅವರ ಸಾಮಾನ್ಯ ಅಂಶವೆಂದರೆ, ನಾವು ಜಾತ್ಯತೀತತೆಯ ರಕ್ಷಕರು ಎಂದು ಹೇಳಿಕೊಂಡಿರುತ್ತಾರೆ. ಬಿಜೆಪಿ ಜೊತೆಗಿರುವಾಗ, ಅದು ಜಾತ್ಯತೀತ ಪಕ್ಷ ಎಂದು ಹೊಗಳುವ ಇದೇ ಪ್ರಾದೇಶಿಕ ಪಕ್ಷಗಳು, ಕಾಂಗ್ರೆಸ್ ಜೊತೆಗಿರುವಾಗ ಬಿಜೆಪಿಯನ್ನು ಕೋಮುವಾದಿ ಎಂದು ದೂರುತ್ತಿರುತ್ತವೆ.

ಈ ಪ್ರಾದೇಶಿಕ ಪಕ್ಷಗಳ ಮುಖಂಡರು, ನಾವು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಯಾವತ್ತಿಗೂ ಘೋಷಿಸುತ್ತಿರುತ್ತಾರೆ. ಆದರೆ ಈ ಹುದ್ದೆಯ ಮೇಲೊಂದು ಕಣ್ಣಿರಿಸಿಯೇ ಇರುತ್ತಾರೆ.

ಆಗಾಗ್ಗೆ ರ‌್ಯಾಲಿಗಳನ್ನು ಸಂಘಟಿಸುತ್ತಾ, ತಮ್ಮ ಸಾಮರ್ಥ್ಯವೇನು, ತಮ್ಮ ಬಲವೇನು ಎಂದು ಪ್ರದರ್ಶಿಸುತ್ತಾ ಕಾಂಗ್ರೆಸ್ ಮತ್ತು ಬಿಜೆಪಿ ಎದೆಯಲ್ಲಿ ಯಾವಾಗಲೂ ಛಳಿ ಮೂಡಿಸುತ್ತಿರುವ ಈ ಪ್ರಾದೇಶಿಕ ಪಕ್ಷಗಳು, ಇಂತಹ ಸಮಾವೇಶಗಳನ್ನು ಸಂಘಟಿಸುವಾಗ ಮಾಧ್ಯಮಗಳೊಂದಿಗೆ ನಾಜೂಕಾಗಿ ಮಾತನಾಡುತ್ತವೆ, ಆದರೆ ತಮ್ಮನ್ನು ಮಾಧ್ಯಮಗಳು ಕಡೆಗಣಿಸುತ್ತಿವೆ, ಮೂಲೆಗುಂಪು ಮಾಡುತ್ತಿವೆ ಎಂದು ಕೂಡ ದೂರುತ್ತಿರುತ್ತವೆ.

ಆದರೆ ಅವರಿಗೆ ನಿಜ ವಿಷಯದ ಪೂರ್ಣ ಅರಿವಿರುತ್ತದೆ. ಪಕ್ಷ ಸಿದ್ಧಾಂತ ಏನಿದ್ದರೂ, ಕೊನೆಯಲ್ಲಿ ಲೆಕ್ಕ ಹಾಕುವುದು ಸಂಖ್ಯೆಗಳನ್ನು. ಅದು ಗುಂಪಿನೊಳಗೆ ಇರಲಿ ಅಥವಾ ಒಂದು ಗುಂಪಾಗಿಯೇ ಇರಲಿ. ಲೋಕಸಭೆ ಅಥವಾ ವಿಧಾನಸಭೆ ರಚನೆಯಾಗುವಾಗ ಬಹುಮತಕ್ಕೆ ಒಂದಷ್ಟು ಸಂಖ್ಯೆಯಗಳ ಕೊರತೆಯಾದಾಗ ಈ ಪಕ್ಷಗಳು ಕಿಂಗ್ ಮೇಕರ್ ಆಗಿಬಿಡುತ್ತವೆ.

ರಾಷ್ಟ್ರೀಯ ಮಟ್ಟದಲ್ಲಿ ಅಸ್ಥಿರತೆ ಸೃಷ್ಟಿಯಾಗುವಲ್ಲಿ ಈ ಪ್ರಾದೇಶಿಕ ಪಕ್ಷಗಳ ಪಾತ್ರ ಬಹುವಾಗಿದ್ದರೂ, ಅವುಗಳಿಲ್ಲದೆ ಚುನಾವಣೆಗೆ ರಂಗು ಇರುವುದು ಸಾಧ್ಯವಿಲ್ಲ, ಅನಿರೀಕ್ಷಿತ ಫಲಿತಾಂಶಗಳು ಬರುವುದೂ ಸಾಧ್ಯವಿಲ್ಲ.

ಯಾರು ಏನೇ ಎನ್ನಲಿ, ಚುನಾವಣೆಯ ಮೊದಲು ಅಥವಾ ಫಲಿತಾಂಶಗಳು ಪ್ರಕಟವಾದ ಬಳಿಕವೇ ಇರಲಿ, ಈ ಪ್ರಾದೇಶಿಕ ಪಕ್ಷಗಳೇ ಚುನಾವಣಾ ಸಮರಕ್ಕೆ ಮತ್ತು ಆ ಬಳಿಕ ರಚನೆಯಾಗುವ ಸರಕಾರ ರಚನೆ ಸಂದರ್ಭ ಆಕರ್ಷಣೆ ಪಡೆಯುತ್ತವೆ, ಕುತೂಹಲ ಹುಟ್ಟಿಸುತ್ತವೆ, ನಿಗೂಢತೆಗೆ ಕಾರಣವಾಗುತ್ತವೆ ಎಂಬುದು ಸುಳ್ಳಲ್ಲ.

[ರಾಜ್ಯದಲ್ಲಿ ನಾಯಕರೆಲ್ಲಿದ್ದಾರೆ?]