ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ರಾಜಕೀಯ ಪಕ್ಷಗಳಿಗೆ ಆಪ್ಯಾಯವಾಗುತ್ತಿವೆ ಸ್ಲಮ್ಮುಗಳು
ಮತಸಮರ
ಚುನಾವಣೆ ಹತ್ತಿರ ಬರುತ್ತಿರುವಂತೆ ಕೊಳಗೇರಿ ಪ್ರದೇಶಗಳು ರಾಜಕೀಯ ಪಕ್ಷಗಳಿಗೆ ಆತ್ಮೀಯವಾಗುತ್ತಿವೆ. ಚುನಾವಣಾ ಸಮಾವೇಶಗಳಿಗೆ ಇಲ್ಲಿಂದ ಜನ ಬಾಡಿಗೆಗೆ ಲಭಿಸುತ್ತಾರೆ ಎಂದು ವರದಿ ಹೇಳುತ್ತದೆ. ಇದಲ್ಲದೆ, ಕೆಲವು ಸ್ಲಮ್ಮುಗಳ ನಿವಾಸಿಗಳು ನಮಗಾರು ಹೆಚ್ಚು ಹಣಕೊಟ್ಟರು ಅವರಿಗೆ ನಮ್ಮ ಮತ ಎಂಬುದಾಗಿ ಬಾಯ್ಬಿಟ್ಟು ಹೇಳುತ್ತಿದ್ದಾರೆ.

ರಾಷ್ಟ್ರದ ಮಹಾ ಚುನಾವಣೆ ಸಮೀಪವಾಗುತ್ತಿರುವಂತೆ ಬೆಂಗಳೂರಿನ ನಗರಾದ್ಯಂತ ಇರುವ ಸುಮಾರು 800 ಕೊಳಗೇರಿಗಳ ಸುಮಾರು ಆರುಲಕ್ಷ ನಿವಾಸಿಗಳು ರಾಜಕೀಯ ಸಮಾವೇಶಗಳು ಮತ್ತು ಮತದಾನದ ಮೂಲಕ ಬರುವ ಅದೃಷ್ಟವನ್ನು ಎದುರು ನೋಡುತ್ತಿದ್ದಾರೆ.

ಸಮಾವೇಶ ಒಂದರಲ್ಲಿ ಪಾಲ್ಗೊಂಡರೆ 150ರಿಂದ 200 ರೂಗಳು ಲಭಿಸಿದರೆ, ಓಟು ನೀಡಿದರೆ 500ರಿಂದ 600 ಗಿಟ್ಟುತ್ತದೆ. ಒಟ್ಟಿನಲ್ಲಿ ಚುನಾವಣೆಗಳು ಇವರ ಪಾಲಿಗೆ ಶೀಘ್ರ ದುಡ್ಡುಮಾಡುವ ಅವಕಾಶ ನೀಡುತ್ತದೆ.

"ಚುನಾವಣೆಗಳ ವೇಳೆ ಸ್ಲಂಗಳವರಿಗೆ ದುಡ್ಡು ನೀಡುವುದು ಎಲ್ಲಾ ಪಕ್ಷಗಳ ಕ್ರಮವಾಗಿದೆ. ಅವರು ವೋಟಿಗಾಗಿ ಇಲ್ಲಿನವರ ಅಂಗೈಗೆ ಬೆಣ್ಣೆ ಹಚ್ಚುತ್ತಾರೆ. ಆದರೆ ಈ ಅನಕ್ಷರಸ್ಥ ಮತದಾರರು ತಪ್ಪು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ" ಎಂದು ಸ್ಲಂ ಜನಾಂದೋಲನ ಕರ್ನಾಟಕ(ಎಸ್‌ಜೆಕೆ) ಸಂಘಟನೆಯ ಸಂಚಾಲಕ ಅರುಲ್ ಸೆಲ್ವಾ ಹೇಳಿದ್ದಾರೆ. ಅವರು ನಗರದ ಹೊರವಲಯದಲ್ಲಿರುವ ಎಲ್.ಆರ್.ನಗರ್ ಕೊಳಗೇರಿಯ ನಿವಾಸಿ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ದತ್ತಾಂಶಗಳ ಪ್ರಕಾರ ಆರು ಲಕ್ಷ ಮಂದಿ ನಗರದ ಸ್ಲಂಗಳಲ್ಲಿ ವಾಸಿಸುತ್ತಾರೆ. ನಗರದಲ್ಲಿ ಒಟ್ಟು ವಾಸಿಸುವವರ ಸಂಖ್ಯೆ 60 ಲಕ್ಷವಾದರೆ, ಇದರಲ್ಲಿ ಶೇ.10ರಷ್ಟು ಮಂದಿ ಕೊಳಗೇರಿಗಳಲ್ಲಿ ವಾಸಿಸುತ್ತಾರೆ. ಕೊಳಗೇರಿಗಳಲ್ಲಿ ವಾಸಿಸುವವರ ಸಂಖ್ಯೆ2010ರ ವೇಳೆಗೆ ಹತ್ತು ಲಕ್ಷ ತಲುಪಲಿದೆ ಎಂದು ಅಂದಾಜಿಸಲಾಗಿದೆ.

"2008ರಲ್ಲಿ ನನಗೆ 1,500 ರೂಪಾಯಿ ಕೊಟ್ಟ ಅಭ್ಯರ್ಥಿಗೆ ನಾನು ಮತಹಾಕಿದ್ದೇನೆ. ಆ ವೇಳೆ ಮೂರು ಪಕ್ಷಗಳ ಸಮಾವೇಶದಲ್ಲಿ ಭಾಗವಹಿಸಿ 600 ರೂಪಾಯಿ ಗಳಿಸಿದ್ದೆ. ಈ ಹಣವನ್ನು ನಾನು ಕುಡಿತ ಮತ್ತು ಸ್ನೇಹಿತರೊಂದಿಗೆ ಮೋಜು ಮಾಡಲು ಬಳಸಿದೆ" ಎಂಬುದಾಗಿ ದಿನಗೂಲಿ ಮಾಡುವ ಸಂಜಯ್ ಪ್ರಸಾದ್ ಹೇಳುತ್ತಾರೆ.

ಎಲ್ಲಾ ಪಕ್ಷಗಳು ಓಟಿಗಾಗಿ ಚುನಾವಣಾ ಸಮಯದಲ್ಲಿ ದುಡ್ಡು ನೀಡಿ ಬಳಿಕ ಈ ಕೊಳಗೇರಿಗಳನ್ನು ಮರೆತು ಬಿಡುತ್ತಾರೆ ಎಂಬುದಾಗಿ ಎಸ್‌ಜೆಕೆ ಸದಸ್ಯರೊಬ್ಬರು ನೊಂದುಕೊಳ್ಳುತ್ತಾರೆ.

ಎಸ್‌ಜೆಕೆ ಒಂದು ರಾಜಕಿಯೇತರ ಸಂಘಟನೆಯಾಗಿದ್ದು, ಇದು ಅಕ್ಷರಸ್ಥ ಸ್ಲಂ ನಿವಾಸಿಗಳ ಸಂಘಟನೆಯಾಗಿದೆ. ಇದರ ಸದಸ್ಯರು ತಮ್ಮ ಸಹನಿವಾಸಿಗಳಲ್ಲಿ ತಿಳುವಳಿಕೆ ಮೂಡಿಸಿ, ತಮ್ಮ ಜೀವನ ಪರಿಸ್ಥಿತಿಯನ್ನು ಸುಧಾರಿಸಿ ಜೀವನದಲ್ಲಿ ಸುಧಾರಣೆ ತರುವಂತಹ ಸೂಕ್ತ ಅಭ್ಯರ್ಥಿಗೆ ಮತಚಲಾಯಿಸುವಂತೆ ಅರಿವು ಮೂಡಿಸಲು ಪ್ರಯತ್ನಿಸುತ್ತಾರೆ.

ಈ ತಿಂಗಳಂತ್ಯದಲ್ಲಿ ಮನೆಮನೆಗೆ ತೆರಳಿ ಸ್ಲಂಗಳ ನಿವಾಸಿಗಳಿಗೆ, ಅವರ ಓಟು ಎಷ್ಟು ಮಹತ್ವದ್ದು ಎಂಬುದಾಗಿ ತಿಳಿಹೇಳಿ, ಈ ಹಕ್ಕನ್ನು ಚಲಾಯಿಸುವ ಮೂಲಕ ಹೇಗೆ ಬದಲಾವಣೆಗಳನ್ನು ತರಬಹುದಾಗಿದೆ ಎಂದು ತಿಳಿಸುವ ಪ್ರಚಾರ ಕಾರ್ಯ ಆರಂಭಿಸುವುದಾಗಿ ಸೆಲ್ವ ಹೇಳುತ್ತಾರೆ.

ಕೊಳಗೇರಿ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಯಾರು ಒದಗಿಸಿ ಕೊಡುತ್ತಾರೋ ಅಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತು ಪ್ರಚಾರ ಗಮನ ಹರಿಸಲಿದೆ.