ತನ್ನ ಪಿಲಿಭಿತ್ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಮನಬಂದಂತೆ ನಾಲಿಗೆ ಹರಿಬಿಟ್ಟಿರುವ ಆರೋಪ ಹೊತ್ತ ಬಿಜೆಪಿ ಅಭ್ಯರ್ಥಿ ವರುಣ್‌ಗಾಂಧಿ ವಿರುದ್ಧ ಚುನಾವಣಾ ಆಯೋಗವು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ.
ಉತ್ತರ ಪ್ರದೇಶದ ಪಿಲಿಭಿತ್‌ನ ದಂಡಾಧಿಕಾರಿಯವರಿಗೆ ಚುನಾವಣಾ ಆಯೋಗವು ಪ್ರಕರಣ ದಾಖಲಿಸಲು ಅಧಿಕಾರ ನೀಡಿದೆ. ಇವರು ವರುಣ್ ಭಾಷಣದ ಕುರಿತು ಆಯೋಗಕ್ಕೆ ವರದಿ ಸಲ್ಲಿಸಿದ್ದರು.
"ನಾನು ಉದ್ರೇಕಕಾರಿಯಾಗಿ ಮಾತನಾಡಿಲ್ಲ ಎಂದು ಹೇಳಿರುವ ವರುಣ್, ತನ್ನ ಭಾಷಣವಿರುವ ಸಿಡಿಯನ್ನು ತಿರುಚಲಾಗಿದೆ" ಎಂದು ಪ್ರತಿಕ್ರಿಯಿಸಿದ್ದಾರೆ.
"ನಾನು ನಾಳೆ ದೆಹಲಿಯಲ್ಲಿ ಪತ್ರಿಕಾಗೊಷ್ಠಿಯನ್ನು ಕರೆದು ಪ್ರತಿವಿಚಾರ ಬಗ್ಗೆ ತನ್ನ ನಿಲುವೇನು ಎಂಬ ಕುರಿತು ಸ್ಪಷ್ಟಪಡಿಸಲಿದ್ದೇನೆ. ನಾನು ಸೂಕ್ತವಾದ ಪಕ್ಷದ ವೇದಿಕೆಯಿಂದ ಮಾತನಾಡಲಿದ್ದೇನೆ" ಎಂದು ಇಂದಿರಾ ಗಾಂಧಿ ಮೊಮ್ಮಗ ವರುಣ್ ಹೇಳಿದ್ದಾರೆ.
ವರುಣ್ ವಿರುದ್ಧ ಬಿಜೆಪಿ ಗರಂ ವರುಣ್ ಗಾಂಧಿ ಮುಸ್ಲಿಮರ ವಿರುದ್ಧ ಉದ್ರೇಕಕಾರಿ ಭಾಷಣ ಮಾಡಿರುವ ಕ್ರಮದಿಂದ ಕೋಪಗೊಂಡಿರುವ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷ ಜೆಡಿ(ಯು) ವರುಣ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿವೆ.
ವರುಣ್ ಆವರ ಹೇಳಿಕೆಗಳು ಆಘಾತಕಾರಿ ಎಂಬುದಾಗಿ ಬಿಜೆಪಿ ನಾಯಕ ಶಹನವಾಜ್ ಹುಸೇನ್ ಹೇಳಿದ್ದು, ಅವರು ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದೇ ವೇಳೆ ಅಭ್ಯರ್ಥಿಗಳು ತಮ್ಮ ಭಾಷಣದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.
ವರುಣ್ ಭಾಷಣದ ಕುರಿತು ಚುನಾವಣಾ ಆಯೋಗವು ಪರಿಶೀಲನೆ ನಡೆಸಿ ನ್ಯಾಯಯುತ ವಿಚಾರಣೆ ನಡೆಸಬೇಕು ಎಂದು ಬಿಜೆಪಿಯ ಮಿತ್ರಪಕ್ಷವಾಗಿರುವ ಜೆಡಿಯು ಪಕ್ಷದ ನಾಯಕ ಶಿವಾನಂದ ತಿವಾರಿ ಒತ್ತಾಯಿಸಿದ್ದಾರೆ.
'ಹಿಂದೂಗಳು ಇಲ್ಲಿರಿ, ಮಿಕ್ಕವರು ಪಾಕ್‌ಗೆ ಹೋಗಿ' ಭಾರತೀಯ ಜನತಾಪಕ್ಷದಿಂದ ಸ್ಫರ್ಧಿಸುತ್ತಿರುವ ವರುಣ್‌ಗಾಂಧಿ ತನ್ನ ಚುನಾವಣಾ ಪ್ರಚಾರದಲ್ಲಿ ಬಾಯಿಗೆ ಬಂದಂತೆ ಮಾತನಾಡಿ, ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮುಸ್ಲಿಮರ ವಿರುದ್ಧ ಓತಪ್ರೋತವೆಂಬಂತೆ ಮಾತನಾಡಿರುವ ವರುಣ್ ಇದೀಗ ನೀತಿ ಸಂಹಿತೆ ಉಲ್ಲಂಘನೆ ಆಪಾದನೆ ಎದುರಿಸುತ್ತಿದ್ದಾರೆ. ಅವರ ಭಾಷಣದ ಸ್ಯಾಂಪಲ್ ಇಂತಿದೆ.
"ಎಲ್ಲಾ ಹಿಂದೂಗಳು ಈ ಬದಿಯಲ್ಲಿರಿ. ಮತ್ತು ಉಳಿದವರನ್ನು ಪಾಕಿಸ್ತಾನಕ್ಕೆ ಕಳುಹಿಸಿ".
"ಯಾರು ಹಿಂದೂಗಳನ್ನು ಗುರಿಯಾಗಿಸುತ್ತಾರೋ ಅವರ ಕೈಗಳನ್ನು ಕತ್ತರಿಸುವೆ"
"ಇದು ಕೈಯಲ್ಲ. ಇದು ತಾವರೆಯ ಶಕ್ತಿ. ಇದು ಮುಸ್ಲಿಮರ ತಲೆ ಕತ್ತರಿಸಲಿದೆ. ಜೈ ಶ್ರೀರಾಮ್. ಯಾರಾದರೂ ಹಿಂದೂಗಳತ್ತ ಬೆರಳುತೋರಿದರೆ, ಯಾರಾದರೂ ಹಿಂದೂಗಳು ದುರ್ಬಲರು ಮತ್ತು ನಾಯಕರಿಲ್ಲದವರೆಂದು ತಿಳಿದಿದ್ದರೆ... ಈ ನಾಯಕರು ಓಟಿಗಾಗಿ ನಮ್ಮ ಬೂಟುಗಳನ್ನು ನೆಕ್ಕುತ್ತಾರೆ ಎಂದು ಯಾರಾದರೂ ತಿಳಿದಿದ್ದರೆ, ಯಾರದರೂ ಹಿಂದೂಗಳತ್ತ ಬೆರಳೆತ್ತಿದರೆ, ಅಂತವರ ಕೈಯನ್ನು ಕತ್ತರಿಸುವೆ ಎಂಬುದಾಗಿ ನಾನು ಭಗವದ್ಗೀತೆಯ ಮೇಲೆ ಪ್ರಮಾಣ ಮಾಡುತ್ತೇನೆ."
"ಅವರು ಭಯಹುಟ್ಟಿಸುವ ಹೆಸರನ್ನು ಹೊಂದಿರುತ್ತಾರೆ. ಕರಿಮುಲ್ಲಾ, ನಜರುಲ್ಲಾ... ಹೀಗೇ. ಅವರನ್ನು ರಾತ್ರಿಗಳಲ್ಲಿ ನೋಡಲು ಭಯವಾಗುತ್ತದೆ. ನನ್ನ ಬಂಧುಗಳ ಮಗಳೊಬ್ಬಳಿದ್ದಾಳೆ, ಏಳರ ಹರೆಯದವಳು. ಅವಳು ಸಮಾಜವಾದಿ ಪಕ್ಷದ ಅಭ್ಯರ್ಥಿಯ ಫೋಟೋವನ್ನು ನೋಡಿ, ನನ್ನ ಬಳಿ, ಅಣ್ಣಾ ನಿನ್ನ ಕ್ಷೇತ್ರದಿಂದ ಒಸಮಾಬಿನ್ ಲಾಡೆನ್ ಸ್ಫರ್ಧಿಸುತ್ತಾನೆ ಎಂಬುದು ನನಗೆ ತಿಳಿದಿರಲಿಲ್ಲ ಎಂದು ಹೇಳಿದಳು"
ಸ್ಥಳೀಯ ಗುಂಪೊಂದು ವರುಣ್ ಉದ್ರೇಕಕಾರಿ ಭಾಷಣ ಮಾಡಿರುವ ಕುರಿತು ವರದಿಯೊಂದನ್ನು ಸಲ್ಲಿಸಿದ್ದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ. ಜಿಲ್ಲಾ ದಂಡಾಧಿಕಾರಿಯವರು ಈ ಕುರಿತು ನೀಡಿರುವ ನೋಟೀಸಿಗೆ ಉತ್ತರಿಸಿರುವ ವರುಣ್ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದು, ತನ್ನ ಭಾಷಣವನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ತನ್ನ ಉತ್ತರದಲ್ಲಿ ಹೇಳಿದ್ದರು.
ವರುಣ್ ತನ್ನ ತಾಯಿಯ ಮೇನಕಾ ಗಾಂಧಿ ಐದು ಬಾರಿ ಗೆದ್ದು ಬಂದಿರುವ ಫಿಲಿಭಿತ್ ಕ್ಷೇತ್ರದಿಂದ ಚುನಾವಣೆಗೆ ಸ್ಫರ್ಧಿಸುತ್ತಿದ್ದಾರೆ.
ವರುಣ್ ಗಾಂಧಿಯ ಭಾಷಣದ ಕುರಿತು ಚರ್ಚಿಸಲು ಚುನಾವಣಾ ಆಯೋಗವು ಮಂಗಳವಾರ ಸಭೆ ಸೇರಲಿದೆ. ಭಾಷಣದ ಟೇಪನ್ನು ಸಲ್ಲಿಸಲು ಆಯೋಗವು ಹೇಳಿದೆ.