ನವದೆಹಲಿ: ಇತ್ತೀಚೆಗೆ ತಮ್ಮ ಮಿತ್ರ ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾರನ್ನು ಸಮಾಜವಾದಿ ಪಕ್ಷಕ್ಕೆ ಆಹ್ವಾನಿಸಿರುವ ಅಮರ್ ಸಿಂಗ್ ಇದೀಗ ಅರುಣ್ ಜೇಟ್ಲಿ ಅವರಿಗೂ ತಮ್ಮ ಪಕ್ಷದ ಬಾಗಿಲು ತೆರೆದಿದೆ ಎಂದು ಬಹಿರಂಗವಾಗಿಯೇ ಆಹ್ವಾನ ನೀಡಿದ್ದಾರೆ. ಪಾಟ್ನಾ ಸಾಹಿಬ್ ಕ್ಷೇತ್ರದಲ್ಲಿ ಶತ್ರುಘ್ನರಿಗೆ ಟಿಕೆಟ್ ಸಿಗುವುದೋ ಇಲ್ಲವೋ ಎಂಬ ಅನುಮಾನ ಇರುವಾಗಲೇ ಸಿಂಗ್, ಸಿನ್ಹಾರಿಗೆ ಎಸ್ಪಿಯಿಂದ ಆಹ್ವಾನ ನೀಡಿದ್ದರು. ಆದರೆ, ಈಗಿನ ಸರದಿ ಜೇಟ್ಲಿ ಅವರದ್ದು.
PTI
ಅಂತೂ, ಈಗ ಶತ್ರುಘ್ನ ಸಿನ್ಹಾ ಪಾಟ್ನಾ ಸಾಹಿಬ್ ಕ್ಷೇತ್ರದಿಂದಲೇ ಟಿಕೆಟ್ ಪಡೆದಿದ್ದಾರೆ. ಆದರೂ ಸಮಾಜವಾದಿ ಪಕ್ಷದ ಮುಖಂಡ ಅಮರ್ ಸಿಂಗ್ ಮನೆಗೆ ನೀಡಿದ ಭೇಟಿ ಹಲವು ಲೆಕ್ಕಾಚಾರಗಳಿಗೆ ಎಡೆ ಮಾಡಿತ್ತು. ಈ ಸಂದರ್ಭ ಸುದ್ದಿಗಾರರ ಜತೆಗೆ ಮಾತನಾಡಿದ ಸಿನ್ಹಾ, ನಾನು ಅಮರ್ ಸಿಂಗ್ ಮನೆಗೆ ಬಂದಿದ್ದು ಅವರ ಆರೋಗ್ಯ ವಿಚಾರಿಸಲು ಅಷ್ಟೆ. ನಾನು ಯಾವ ಪಕ್ಷವನ್ನೂ ಅಸ್ಪೃಶ್ಯವೆಂದು ನೋಡುವುದಿಲ್ಲ. ನನಗೆ ಎಲ್ಲ ಪಕ್ಷಗಳಿಂದಲೂ ಉತ್ತಮ ರಾಜಕೀಯ ಗೆಳೆಯರಿದ್ದಾರೆ. ಅಮರ್ ಸಿಂಗ್ ಕೂಡಾ ನನ್ನ ಆತ್ಮೀಯ ಗೆಳೆಯ. ಇಲ್ಲಿಗೆ ಬಂದಿದ್ದೇನೆ ಎಂದರೆ ನಾವು ಪಕ್ಷದ ವಿಚಾರ ಮಾತನಾಡಲು ಭೇಟಿಯಾಗಿದ್ದೇವೆ ಎಂದರ್ಥವಲ್ಲ. ನಾನು ಬಿಜೆಪಿಯಲ್ಲೇ ಇರುವಾಗ ಇನ್ನೊಂದು ಪಕ್ಷಕ್ಕೆ ಸೇರುತ್ತಿದ್ದೇನೆಂಬ ಪ್ರಶ್ನೆ ಹೇಗೆ ಹುಟ್ಟಿಕೊಳ್ಳಲು ಸಾಧ್ಯ ಎಂದು ಮರು ಪ್ರಶ್ನಿಸಿದರು.
ಆದರೆ ಇದೇ ಸಂದರ್ಭ ಪತ್ರಕರ್ತರನ್ನು ಮಾತಿಗೆಳೆದ ಅಮರ್ ಸಿಂಗ್, ಸಿನ್ಹಾ ಅವರನ್ನು ಸಮಾಜವಾದಿ ಪಕ್ಷ ಸೆಳೆಯಲು ಪ್ರಯತ್ನಿಸುತ್ತಿದೆಯೇ ಎಂದು ನನ್ನಲ್ಲೇ ಕೇಳಬಹುದಲ್ಲ ಎಂದು ಅಮರ್ ಸಿಂಗ್ ಪತ್ರಕರ್ತರಿಗೆ ತಿರುಗೇಟು ನೀಡಿದರು.
ಸಿನ್ಹಾ ಅವರಿಗೆ ಯಾವ ಪಕ್ಷವೂ ಅಸ್ಪೃಷ್ಯವೆಂಬ ಭಾವನೆಯಿಲ್ಲ. ನಾನು ಹಲವಾರು ಬಾರಿ ಸಿನ್ಹಾ ಅವರಿಗೆ ಹೇಳುತ್ತಲೇ ಬಂದಿದ್ದೇನೆ. ಯಾರಾದರೂ ನಿಮ್ಮ ಹೃದಯ ಒಡೆದರೆ, ಅರ್ಥಾತ್ ಪಕ್ಷದಲ್ಲಿ ನಿಮ್ಮ ಭಾವನೆಗೆ ಚ್ಯುತಿ ಬಂದರೆ ನೀವು ನನ್ನ ಬಳಿ ಬನ್ನಿ. ನನ್ನ ಹೃದಯದ ಬಾಗಿಲು ನಿಮಗೆ ಸದಾ ತೆರೆದಿರುತ್ತದೆ ಎಂದು ಯಾವತ್ತೋ ಶತ್ರುಘ್ನರಿಗೆ ಹೇಳಿದ್ದೇನೆ ಎಂದರು. ಆದರೆ, ಈಗ ನಡೆದ ಭೇಟಿಗೆ ರಾಜಕೀಯ ಸ್ಪರ್ಷ ನೀಡುವ ಅಗತ್ಯವಿಲ್ಲ ಎಂಬುದನ್ನು ಅಮರ್ ಸಿಂಗ್ ಒತ್ತಿ ಹೇಳಿದರು.
ನನಗೆ ಶತ್ರುಘ್ನ ಸಿನ್ಹಾ ಒಬ್ಬ ಉತ್ತಮ ಗೆಳೆಯ. ಅದಕ್ಕಿಂತಲೂ ನನಗೊಬ್ಬ ಸಹೋದರ ಇದ್ದಂತೆ ಅವರು. ನನಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆಯೆಂದು ತಿಳಿದ ತಕ್ಷಣ ಇಲ್ಲಿಗೆ ಯಾರೂ ಬಂದು ವಿಚಾರಿಸಿಲ್ಲ. ಆದರೆ, ನನ್ನ ಆತ್ಮೀಯರಾಗಿರುವ ಸಿನ್ಹಾ ಬಂದು ನನ್ನ ಕ್ಷೇಮ ಸಮಾಚಾರ ಮಾತನಾಡಿದರು, ಅಷ್ಟೆ. ಇಷ್ಟಕ್ಕೆಲ್ಲ ರಾಜಕೀಯ ಬಣ್ಣವನ್ನು ಯಾಕೆ ಹಚ್ಚುತ್ತೀರಿ ಎಂದು ತಿರುಗಿ ಪ್ರಶ್ನಿಸಿದರು ಸಿಂಗ್.