ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಪ್ರಧಾನಿಯಾಗಲು ಆಡ್ವಾಣಿಗೆ ಉಮಾ ಬೆಂಬಲ
ಮತಸಮರ
ಭಾರತದ ಮುಂದಿನ ಪ್ರಧಾನಿಯಾಗಲು ಭಾರತೀಯ ಜನತಾ ಪಕ್ಷದ ಎಲ್.ಕೆ. ಆಡ್ವಾಣಿಯವರಿಗೆ ಭಾರತೀಯ ಜನಶಕ್ತಿ ಪಕ್ಷದ ನಾಯಕಿ ಉಮಾಭಾರತಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಆಡ್ವಾಣಿಯರ ವಿರುದ್ಧವೇ ಸಿಡಿದೆದ್ದು, ಪಕ್ಷದಿಂದ ಹೊರನಡೆದು ತನ್ನದೇ ಪಕ್ಷ ಕಟ್ಟಿದ್ದ ಉಮಾಭಾರತಿ ಇದೀಗ ವರ್ಷಗಳ ಬಳಿಕ ಯು ಟರ್ನ್ ಹೊಡೆದಿದ್ದಾರೆ. "ನೀವು ಪ್ರಧಾನಿಯಾಗುವ ವಿಚಾರದಲ್ಲಿ ನಾನು ಅಡ್ಡಿಯಾಗಬಾರದೆಂದು ನಿರ್ಧರಿಸಿದ್ದೇನೆ" ಎಂದು ಅವರು ಪ್ರಧಾನಿಯವರನ್ನುದ್ದೇಶಿಸಿ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರನ್ನು 2005ರಲ್ಲಿ ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು.
"ನೀವು ಪ್ರಧಾನಿಯಾಗಬೇಕು ಮತ್ತು ಗಂಭೀರ ರಾಷ್ಟ್ರೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುಬೇಕು ಎಂದು ನಾನು ಇಚ್ಛಿಸುತ್ತೇನೆ" ಎಂದವರು ತನ್ನ ಪತ್ರದಲ್ಲಿ ಹೇಳಿದ್ದಾರೆ.

ಮಾಧ್ಯಮಗಳೆದುರೇ ಆಡ್ವಾಣಿಯರ ವಿರುದ್ಧ ಉರಿದುಬಿದ್ದಿದ್ದ ಉಮಾರನ್ನು 2004ರಲ್ಲಿ ಪಕ್ಷ ಅಮಾನತ್ತುಗೊಳಿಸಿತ್ತು. 2005ರಲ್ಲಿ ಆರ್ಎಸ್ಎಸ್ ಒತ್ತಡದ ಹಿನ್ನೆಲೆಯಲ್ಲಿ ಅವರ ಅಮಾನತ್ತನ್ನು ಹಿಂತೆಗೆದುಕೊಂಡಿದ್ದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಗೆ ನೇಮಿಸಲಾಗಿತ್ತು. ಅದೇ ವರ್ಷ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಶಿವರಾಜ್ ಸಿಂಗ್ ಅವರನ್ನು ಪಕ್ಷ ನೇಮಿಸಿದಾಗ ಸಿಡಿದು ಬಿದ್ದ ಉಮಾರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ಆಡ್ವಾಣಿ ಅವರು ಪ್ರಧಾನಿಯಾಗಲು ಉಮಾ ಬೆಂಬಲ ಸೂಚಿಸಿದ್ದಾರದರೂ, ಬಿಜೆಪಿಗೆ ಮರುಸೇರ್ಪಡೆಗೊಳ್ಳುವ ಅಥವಾ ತನ್ನ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ.