ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಚುನಾವಣಾ ಆಯೋಗದಿಂದ ಅಭ್ಯರ್ಥಿಗಳಿಗೆ ಐಸ್‌ಕ್ರೀಂ, ಬಲೂನ್, ಕೇಕ್!
ಮತಸಮರ
ಬಲೂನ್‌ನಿಂದ ಗಾಳಿಪಟದವರೆಗೆ, ಬಾಚಣಿಗೆಯಿಂದ ಬ್ರಷ್‌ವರೆಗೆ, ಕೇಕ್‌ನಿಂದ ಐಸ್‌ಕ್ರೀಂನವರೆಗೆ ಎಲ್ಲವೂ ಈಗ ಚುನಾವಣಾ ಆಯೋಗದಲ್ಲಿ ಎಲ್ಲವೂ ಇದೆ. ಆಯ್ಕೆ ಮಾಡಿಕೊಳ್ಳುವುದು ಅಭ್ಯರ್ಥಿಗಳಿಗೆ ಬಿಟ್ಟಿದ್ದು.

ಕನ್‌ಫ್ಯೂಸ್ ಆಗಬೇಡಿ. ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಗಳಿಗಾಗಿ ಚುನಾವಣಾ ಆಯುಕ್ತರು ವಿವಿಧ ಚಿಹ್ನೆಗಳನ್ನು ಮುಂದಿಟ್ಟಿದ್ದಾರೆ. 59 ಚಿಹ್ನೆಗಳು ಈಗಿದ್ದು, ಅವುಗಳಲ್ಲಿ ಪ್ರಾಣಿಗಳು, ತಿಂಡಿಗಳು, ಹಣ್ಣುಹಂಪಲು ಹಾಗೂ ಮತ್ತಿತರ ಎಲ್ಲ ವಸ್ತುಗಳೂ ಸೇರಿವೆ. ಈ ಚಿಹ್ನೆಗಳನ್ನು ಹಂಚುವಿಕೆಯ ಮುಖ್ಯ ಉದ್ದೇಶ, ಯಾವ ಪಕ್ಷಕ್ಕೂ ಸೇರದ ಅಭ್ಯರ್ಥಿಯನ್ನು ಮತದಾರರು ಸುಲಭವಾಗಿ ಚಿಹ್ನೆಯ ಮುಖಾಂತರ ಗುರುತಿಸಲಿ ಎಂದು ಎನ್ನುತ್ತಾರೆ ಚುನಾವಣಾ ಅಧಿಕಾರಿಗಳು.

ಮನುಷ್ಯನಿಗೆ ಚಿತ್ರಗಳ, ಅಥವಾ ಚಿಹ್ನೆಗಳ ಮೂಲಕ ಗುರುತಿಸುವುದು ಸುಲಭ. ಆ ಮೂಲಕ ಅಭ್ಯರ್ಥಿಗಳನ್ನೂ ಮತದಾರ ಸುಲಭವಾಗಿ ನೆನಪಿಟ್ಟುಕೊಳ್ಳಲು ಸಹಾಯವಾಗಬಹುದು ಎಂಬುದು ಆಯೋಗದ ಲೆಕ್ಕಾಚಾರ.

ಬಾಳೆಹಣ್ಣು, ಕೇಕ್, ಕ್ಯಾರೆಟ್, ತೆಂಗಿನಕಾಯಿ, ಐಸ್‌ಕ್ರೀಂ, ಬ್ರೆಡ್, ಜೋಳ ಮತ್ತಿತರ ತಿನ್ನುವ ಪದಾರ್ಥಗಳು ಕೆಲವಾದರೆ, ಇನ್ನೂ ಕೆಲವು ದಿನನಿತ್ಯದ ಬಳಕೆಯ ವಸ್ತುಗಳು ಚಿಹ್ನೆಗಳಾಗಿವೆ. ಬಾಸ್ಕೆಟ್, ಬ್ರಷ್, ಫ್ಯಾನ್, ಬಾಚಣಿಗೆ, ಪಾತ್ರೆ, ಸಿಲಿಂಡರ್, ಪ್ರೆಶರ್ ಕುಕ್ಕರ್, ಗ್ಯಾಸ್ ಸ್ಟವ್... ಹೀಗೆ ಪಟ್ಟಿ ಸಾಗುತ್ತದೆ.

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ಗಳಿಗೆ ಕೈ, ಕಮಲಗಳಂತಹ ಅಧಿಕೃತ ಚಿಹ್ನೆಗಳಿದ್ದರೆ, ಮಕ್ಕಳ ಆಟದ ವಸ್ತುಗಳಾದ ಬಲೂನ್, ಗೊಂಬೆ ಮತ್ತಿತರ ಚಿಹ್ನೆಗಳೂ ಪಟ್ಟಿಯಲ್ಲಿವೆ. ಅಲ್ಮೆರಾ, ಬ್ಲಾಕ್‌ಬೋರ್ಡ್, ಬ್ಯಾಟ್ಸ್‌ಮನ್, ಬ್ರೀಫ್‌ಕೇಸ್, ಕ್ಯಾಮರಾ, ಕ್ಯಾಂಡಲ್, ಡೀಸೆಲ್ ಪಂಪ್, ಜಗ್, ರೈಲ್ವೇ ಎಂಜಿನ್, ಶಟಲ್, ಚಮಚ, ವಾಕಿಂಗ್ ಸ್ಟಿಕ್, ವಿಶಲ್.. ಹೀಗೆ ಫನ್ನಿಯಾದ ಚಿಹ್ನೆಗಳು ಈ ಬಾರಿಯ ಮತದಾನದ ಪಟ್ಟಿಯಲ್ಲಿ ರಾರಾಜಿಸಲಿವೆ. ಯಾರಿಗೆ ಚಿಹ್ನೆ ಇಷ್ಟವಾಗುತ್ತದೋ.. ಅಭ್ಯರ್ಥಿ ಇಷ್ಟವಾಗುತ್ತಾರೋ.. ಮತದಾರರೇ ನಿರ್ಧರಿಸಬೇಕು.