ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಚುನಾವಣಾ ಪ್ರಚಾರಕ್ಕೆ ಹೊಸಹೊಸ ಗಿಮಿಕ್‌!
ಮತಸಮರ
ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುವುದು, ಮೀನಿಗೆ ಗಾಳಹಾಕುವುದು, ಮಕ್ಕಳೊಂದಿಗೆ ಫುಟ್ಬಾಲ್ ಆಡುವುದು, ಕವನ ಬರೆಯುತ್ತಾ, ಚಿತ್ರಬರೆಯುತ್ತಾ ಇವುಗಳೆಲ್ಲ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರಕ್ಕೆ ಅಭ್ಯರ್ಥಿಗಳು ಯೋಜಿಸಿರುವ ಹೊಸಹೊಸ ಚುನಾವಣಾ ತಂತ್ರಗಳು.

ಜಾದವ್‌ಪುರದ ಹಾಲಿ ಸಂಸದ ಸಿಪಿಎಂನ ಸುಜನ್ ಚಕ್ರವರ್ತಿ ಅವರು ಈ ಬಾರಿಯೂ ಈ ಕ್ಷೇತ್ರವನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಇವರು ಇದ್ದಕ್ಕಿದ್ದಂತೆ ಒಂದು ದಿನ ಲೋಕಲ್ ಟ್ರೇನಿನಲ್ಲಿ ಪ್ರತ್ಯಕ್ಷವಾಗಿ ಸಹ ಪ್ರಯಾಣಿಕರೊಂದಿಗೆ ಮಾತಿಗಿಳಿದು ಕಷ್ಟಸುಖ ವಿಚಾರಿಸಿದರು. ಆದರೆ ಅವರು ಮತಯಾಚಿಸಲಿಲ್ಲ.

"ಮತಗಳಿಗಾಗಿ ವಿನಂತಿಸಲು ನಾನು ಇಚ್ಛಿಸುವುದಿಲ್ಲ. ನಾನು ಜನತೆಗೆ ನಿಕಟವಾದೆನೆಂದರೆ ಮತಗಳು ತಾನಾಗಿ ಬರುತ್ತವೆ" ಎಂದು ಹೇಳುವ ಚಕ್ರವರ್ತಿ ತನ್ನಕ್ಷೇತ್ರದ ಹುಡುಗರೊಂದಿಗೆ ಫುಟ್ಬಾಲ್ ಆಡಿದ್ದಾರೆ.

ಇವರು ವೆಬ್‌ಸೈಟ್ ಒಂದನ್ನು ಹೊಂದಿದ್ದು, ಪಕ್ಷದ ಮುಖ್ಯಸ್ಥ ಜ್ಯೋತಿಬಸು ಅವರು ಅದನ್ನು ಇತ್ತೀಚೆಗೆ ಅನಾವರಣಗೊಳಿಸಿದ್ದರು. ಇದರಲ್ಲಿ ಅವರ ಸಂಪೂರ್ಣ ವಿವರಗಳು, ಕ್ಷೇತ್ರವಿವರ, ಯಶಸ್ಸು, ಕಾರ್ಯಕ್ಷಮತೆ ಹೀಗೆ ಎಲ್ಲಾವಿವರಗಳು ಸೇರಿವೆ. ಅಲ್ಲದೆ ಇಲ್ಲಿ ಜನತೆ ಪ್ರಶ್ನೆಗಳನ್ನು ಕೇಳಲೂ ಅವಕಾಶವಿದೆ. ಈ ಪ್ರಶ್ನೆಗಳಿಗೆ 24 ಗಂಟೆಗಳೊಳಗಾಗಿ ಉತ್ತರಿಸುವ ಭರವಸೆಯನ್ನೂ ಸಂಸದರು ನೀಡಿದ್ದಾರೆ.

ಚಕ್ರವರ್ತಿ ಇಷ್ಟೆಲ್ಲ ಸರ್ಕಸ್ ಮಾಡುತ್ತಿರುವಾಗ ಅವರ ಎದುರಾಳಿ ಸುಮ್ಮನಿರಲಾಗುತ್ತದಾ? ಇದೇ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಕಬೀರ್ ಸುಮನ್ ಸ್ವತಹ ಕವಿ ಹಾಗೂ ಹಾಡುಗಾರ. ಇವರು ಚಿತ್ರಗಳನ್ನು ರಚಿಸುತ್ತಾ, ಕವಿತೆಗಳನ್ನು ಬರೆಯುತ್ತಾ, ಹಾಡುತ್ತಾ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ.

"ಅವರು ಕ್ಷೇತ್ರವನ್ನು ಈಗಾಗಲೇ ಪ್ರತಿನಿಧಿಸಿದ್ದಾರೆ. ನಾನು ಹೊಸಬ. ಈ ಕ್ಷೇತ್ರಕ್ಕೂ ಇನ್ನಷ್ಟು ಕಾರ್ಯ ಆಗಬೇಕಿದೆ" ಎಂದು ವಿರೋಧಿ ಬಗ್ಗೆ ನಾಜೂಕಾಗಿ ಹೇಳುತ್ತಾರೆ.

ದಕ್ಷಿಣ ಕೋಲ್ಕತಾದ ಸಿಪಿಎಂ ಅಭ್ಯರ್ಥಿ ರಾಬಿನ್ ದೇಬ್ ಅವರಂತೂ ಮತದಾರರಿಗೆ ಗಾಳಹಾಕಲು, ಮೀನು ಹಿಡಿಯುವ ಗಾಳವನ್ನೇ ಕೈಗೆತ್ತಿಕೊಂಡಿದ್ದಾರೆ. ಇವರು ಬಹುತೇಕ ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಎದುರಾಳಿ.
ಇವರು ತನ್ನ ಕ್ಷೇತ್ರದ ಕೊಳವೊಂದರಲ್ಲಿ ಮೀನಿಗೆ ಗಾಳಹಾಕಲು ಕುಳಿತೇ ಬಿಟ್ಟರು. ತಕ್ಷಣ ಇವರ ಸುತ್ತ ಜನ ಜಮಾಯಿಸಿದರು. ಅವರು ಎರಡು ಮೀನುಗಳನ್ನೂ ಹಿಡಿದರು. ಆದರೆ ಎಷ್ಟು ಮತಗಳಿಗೆ ಗಾಳಹಾಕಿದರು ಎಂಬುದಾಗಿ ಗೊತ್ತಾಗಲಿಲ್ಲ.

"ಗಾಳಹಾಕಬೇಕೆಂಬುದು ತನ್ನ ದೀರ್ಘಕಾಲದ ಕನಸು. ಈಗೊಂದು ಅವಕಾಶ ಸಿಕ್ಕಿತು. ನನಗೆ ತಡೆಯಲಾಗಲಿಲ್ಲ. ನಾನು ಮತಯಾಚಿಸುವುದಿಲ್ಲ. ಇದು ಚುನಾವಣಾ ಪ್ರಚಾರದ ಭಾಗವೆಂದು ಯಾರೂ ಭಾವಿಸಬಾರದು. ಜನರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸುವುದಷ್ಟೆ ನನ್ನ ಉದ್ದೇಶ ಎಂದು ಹೇಳಿಕೊಂಡಿದ್ದಾರೆ.

ಡಮ್‌ಡಮ್ ಕ್ಷೇತ್ರದಿಂದ ಮರುಆಯ್ಕೆ ಬಯಸಿರುವ ಸಿಪಿಎಂನ ಅಮಿತವ ನಂದಿ ಅವಕು ಇತ್ತೀಚೆಗೆ ಯುವಕರೊಂದಿಗೆ ಕೇರಂ ಆಡಿದರು.