ಕೇಂದ್ರದಲ್ಲಿ ಚುನಾವಣೆಯ ಬಳಿಕ ಪರ್ಯಾಯ ಜಾತ್ಯತೀತ ಸರ್ಕಾರದ ನಿರ್ಮಾಣಕ್ಕೆ ಪಕ್ಷವು ಬೆಂಬಲ ನೀಡುವ ಸಾಧ್ಯತೆಯನ್ನು ತಳ್ಳಿಹಾಕಿರುವ ಕಾಂಗ್ರೆಸ್, ಸಿಪಿಐ(ಎಂ) ಹಾಗೇನಾದರೂ ಭಾವಿಸಿದಲ್ಲಿ ಇದು 'ಬಾಲ ನಾಯಿಯನ್ನು ಅಲ್ಲಾಡಿಸಿದಂತೆ' ಎಂದು ವ್ಯಂಗ್ಯವಾಡಿದೆ.
ಪಕ್ಷವು ಚುನಾವಣೆಯ ಬಳಿಕ ಸರ್ಕಾರ ರಚನೆಗೆ ಬೆಂಬಲಿಸುವ ಪಾತ್ರ ವಹಿಸದು, ಬದಲಿಗೆ ಅರು ಸರ್ಕಾರದ ನೇತೃತ್ವ ವಹಿಸಲಿದೆ ಎಂದು ಕಾಂಗ್ರೆಸ್ ವಕ್ತಾರ ಅಭಿಶೇಕ್ ಸಿಂಘ್ವಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
"ಸರ್ಕಾರ ರೂಪಿಸಲು ನಾವು ಜಾತ್ಯತೀತ ಪಕ್ಷಗಳ ಬೆಂಬಲವನ್ನು ಪರಿಗಣಿಸಲಿದ್ದೇವೆ" ಎಂದೂ ಅವರು ತಿಳಿಸಿದರು. ಅವರು ಗುರುವಾರ ಪ್ರಕಾಶ್ ಕಾರಟ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸುತ್ತಿದ್ದರು.
ಕಾರಟ್ ಹೇಳಿಕೆ ಮಹಾ ಚುನಾವಣೆಯ ಬಳಿಕ ಪರ್ಯಾಯ ಸರ್ಕಾರ ಒಂದನ್ನು ರೂಪಿಸಲು ಕಾಂಗ್ರೆಸ್ ಜತೆ ಮಾತುಕತೆ ನಡೆಸಲು ತಾನು ಮುಕ್ತವಾಗಿರುವುದಾಗಿ ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಹೇಳಿದ್ದರು.
"ನಾವು ಅವರೊಂದಿಗೆ ವ್ಯವಹರಿಸಬಹುದು. ಅಲ್ಲದೆ ಪರ್ಯಾಯ ಜಾತ್ಯತೀತ ಸರ್ಕಾರ ಒಂದನ್ನು ರೂಪಿಸಲು ಬೆಂಬಲಿಸುವಂತೆ ವಿನಂತಿಸಬಹುದು. ಇದು ಸಾಧ್ಯ. ಏಕೆ ಸಾಧ್ಯವಿಲ್ಲ? ಇದನ್ನು ನಾನು ತಳ್ಳಿಹಾಕಲಾರೆ" ಎಂಬುದಾಗಿ ಕಾರಟ್ ಅವರು ಖಾಸಗೀ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ಮಿತ್ರಕೂಟಗಳಿಗೆ ಪರ್ಯಾಯವಾಗಿ ತೃತೀಯರಂಗವನ್ನು ಹುಟ್ಟುಹಾಕಲು ಪ್ರಮುಖ ಪಾತ್ರ ವಹಿಸಿದ್ದ ಕಾರಟ್ ಅವರ ಈ ಹೇಳಿಕೆ ಅಚ್ಚರಿ ಮೂಡಿಸಿತ್ತು.
ಸರ್ಕಾರವು ಅಮೆರಿಕದೊಂದಿಗೆ ನಾಗರಿಕ ಅಣುಒಪ್ಪಂದ ಪ್ರಕ್ರಿಯೆಯಲ್ಲಿ ಮುಂದುವರಿಯುವುದನ್ನು ವಿರೋಧಿಸಿ ಎಡಪಕ್ಷಗಳು ಯುಪಿಎ ಮೈತ್ರಿಕೂಟದಿಂದ ಹೊರಬಂದಿದ್ದವು.
"ಇದು ಅಸ್ಪಶೃತೆಯ ಪ್ರಶ್ನೆಯಲ್ಲ. ನಾವು ಎಲ್ಲಾ ಪಕ್ಷದೊಂದಿಗೆ ವ್ಯವಹರಿಸಬಹುದು. ಆದರೆ, ಆ ವ್ಯವಹಾರವು ಜನಾದೇಶದ ಸ್ವರೂಪಕ್ಕೆ ಮಿತವಾಗಿದೆ" ಎಂದು ಕಾರಟ್ ಹೇಳಿದ್ದಾರೆ.