ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಹುದ್ದೆಯ ಸ್ಫರ್ಧೆಯಲ್ಲಿದ್ದ ಶಶಿ ತರೂರ್ ಅವರು ತಿರುವನಂತಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಗುರುವಾರ ನಡೆದ ಎಐಸಿಸಿ ಸಭೆಯಲ್ಲಿ ತರೂರ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದ್ದು, ತರೂರ್ ಅವರು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ವೈಯಕ್ತಿಕ ಆಯ್ಕೆ ಎಂದು ಹೇಳಲಾಗಿದೆ.
ಕೇರಳದ ಪಾಲಕ್ಕಾಡ್ ನವರಾಗಿರುವ ತರೂರ್, ವಿಶ್ವಸಂಸ್ಥೆಯ ಉಪಮಹಾ ಕಾರ್ಯದರ್ಶಿಯಾಗಿದ್ದರು. 2006 ರಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಭಾರತದ ಅಭ್ಯರ್ಥಿಯಾಗಿದ್ದರು. ಆದರೆ ಮಾಹಾಕಾರ್ಯದರ್ಶಿ ಪಟ್ಟವು ಬಾನ್ ಕಿ ಮೂನ್ ಅವರಿಗೆ ಒಲಿದಿತ್ತು. ತರೂರ್ 1956 ರಲ್ಲಿ ಲಂಡನ್ ನಲ್ಲಿ ಜನಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಅವಕಾಶ ನೀಡಿದ್ದಕ್ಕೆ ತರೂರ್ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಇದೊಂದು ದೊಡ್ಡ ಸವಾಲು ಎಂದಿರುವ ಅವರು ಉಳಿದಿರುವ ಕಡಿಮೆ ಅವಧಿಯಲ್ಲಿ ಸಾಧ್ಯವಾದಷ್ಟು ಜನರನ್ನು ಭೇಟಿ ಮಾಡಲು ಯತ್ನಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ.