ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ತರೂರ್ ವಿರುದ್ಧ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ !
ಮತಸಮರ
ಕಾಂಗ್ರೆಸ್ ಸ್ವಾಮ್ಯದ ಕೇರಳ ಮೂಲದ ಟಿವಿ ಚಾನಲೊಂದರ ಮುಖ್ಯಸ್ಥ ವಿಜಯನ್ ಥಾಮಸ್ ಮುಂಬರುವ ಲೋಕಸಭಾ ಚುನಾವಣೆಗೆ ತಿರುವನಂತಪುರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಇದೇ ಕ್ಷೇತ್ರದಲ್ಲಿ ವಿಶ್ವಸಂಸ್ಥೆಯ ಉಪಮಹಾಕಾರ್ಯದರ್ಶಿಯಾಗಿದ್ದ ಶಶಿ ತರೂರ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.

ಜೈ ಹಿಂದ್ ಎಂಬ ಟಿವಿ ಚಾನಲ್‌ನ ಮುಖ್ಯಸ್ಥರಾಗಿರುವ ಥಾಮಸ್ ಅವರ ಪೋಸ್ಟರ್‌ಗಳು ಈಗ ತಿರುವನಂತರದ ಎಲ್ಲೆಡೆ ರಾರಾಜಿಸುತ್ತಿದೆ. ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ, ಜೈ ಹಿಂದ್ ಟಿವಿ ಚಾನಲ್‌ಗೆ ಬಂಡವಾಳ ಹೂಡುವಾಗ, ಪಕ್ಷದಿಂದ ತಿರುವನಂತರಪುರ ಕ್ಷೇತ್ರದಲ್ಲಿ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಈಗ ಕಾಂಗ್ರೆಸ್ ಅಲ್ಲಿ ತರೂರ್ ಅವರನ್ನು ಕಣಕ್ಕಿಳಿಸಿರುವುದರಿಂದ ಅವರು ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇವರು ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ಎಂದೇ ಬಿಂಬಿಸಲಾಗುತ್ತಿದೆ.

ಆದರೆ, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಚೆನ್ನಿತಾಳ, ಹೈಕಮಾಂಡ್ ನಿರ್ಣಯದ ವಿರುದ್ಧ ಹೋದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದ್ದಾರೆ. ಪಕ್ಷದ ಮೂಲಗಳ ಪ್ರಕಾರ ಶಶಿ ತರೂರ್ ಅವರು ಥಾಮಸ್ ಅವರನ್ನು ಭೇಟಿಯಾಗಿದ್ದು, ನಿರ್ಧಾರವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಕಳೆದ ಎರಡು ವರ್ಷಗಳ ಹಿಂದಷ್ಟೆ ಜೈ ಹಿಂದ್ ಚಾನಲ್ ಆರಂಭವಾಗಿದ್ದು, ಭಾರತ್ ಬ್ರಾಡ್‌ಕ್ಯಾಸ್ಟಿಂಗ್ ನೆಟ್‌ವರ್ಕ್ ಹಾಗೂ ಜೈಹಿಂದ್ ಕಮ್ಯುನಿಕೇಶನ್ಸ್ ಜಂಟಿಯಾಗಿ ಆರಂಭಿಸಿದ್ದವು. ದುಬೈಯ ಉದ್ಯಮಿಯಾಗಿರುವ ಥಾಮಸ್ ಚಾನಲ್‌ಗಾಗಿ ಹೆಚ್ಚು ಬಂಡವಾಳ ಹೂಡಿದ್ದು, ಅವರು ತಿರುವನಂತಪುರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು ಎನ್ನಲಾಗಿದೆ.