ಉಮಾಭಾರತಿ ಅವರ ನಿಷ್ಠಾವಂತ ಕಾರ್ಯಕರ್ತನಾಗಿದ್ದ ಭಾರತೀಯ ಜನಶಕ್ತಿ(ಬಿಜೆಎಸ್) ನಾಯಕ ಪ್ರಹ್ಲಾದ್ ಪಟೇಲ್ ಅವರು, ಜನಶಕ್ತಿಗೆ ಟಾಟಾ ಹೇಳಿ, ನಾಲ್ಕು ವರ್ಷದ ಬಳಿಕ ಮರಳಿ ಬಿಜೆಪಿಗೆ ಸೇರಿದ್ದಾರೆ.
ಪಟೇಲ್ ಅವರು ತನ್ನ ದೊಡ್ಡ ಸಂಖ್ಯೆಯ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರಿದ್ದು, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವಾಣ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನರೇಂದ್ರ ಸಿಂಗ್ ತೋಮರ್ ಇವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಪಟೇಲ್ ಅವರು ಪಕ್ಷಕ್ಕೆ ಮರಳಿರುವ ಕಾರಣ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇನ್ನಷ್ಟು ಉತ್ತಮವಾಗಿ ಸ್ಫರ್ಧಿಸಬಹುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
"ಪ್ರಹ್ಲಾದ್ ಪಟೇಲ್ ಬಿಜೆಪಿಗೆ ಸೇರ್ಪಡೆಯಾಗಿದ್ದು, ಅವರಿಗೆ ಪಕ್ಷದಲ್ಲಿ ಯಾವುದೇ ಸ್ಥಾನ ನೀಡಿಲ್ಲ ಹಾಗೂ ಅವರು ಪಕ್ಷದ ಸೇರ್ಪಡೆಗೆ ಯಾವುದೇ ಷರತ್ತು ವಿಧಿಸಿಲ್ಲ" ಎಂದು ಬಿಜೆಪಿ ಸಂಸದ ಪ್ರಭಾತ್ ಜಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಾಜಿ ಕೇಂದ್ರ ಸಚಿವರಾಗಿದ್ದ ಪಟೇಲ್ ಅವರು ಬಿಜೆಪಿ ತೊರೆದು ಬಿಜೆಎಸ್ ಸೇರಿದ್ದರು. ಚೌವಾಣ್ ಅವರನ್ನು ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿಸುವುದನ್ನು ವಿರೋಧಿಸಿದ್ದರು. ಈ ಕಾರಣಕ್ಕಾಗಿ ಅವರನ್ನು ಬಿಜೆಪಿಯಿಂದ ಅಮಾನತ್ತು ಮಾಡಲಾಗಿತ್ತು.