ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಎನ್‌ಟಿಆರ್ ಕುಟುಂಬದೊಳಗಿನ ಬಿರುಕು ಬಹಿರಂಗ
ಮತಸಮರ
ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿರುವಾಗಲೇ ಆಂಧ್ರಪ್ರದೇಶದ ಮಾಜಿ ಮುಖ್ಯ ಮಂತ್ರಿ ಹಾಗೂ ತೆಲುಗು ದೇಶಂ (ಟಿಡಿಪಿ) ಪಕ್ಷವನ್ನು ಕಟ್ಟಿ ಬೆಳೆಸಿದ ಎನ್.ಟಿ.ರಾಮರಾವ್ ಕುಟುಂಬದ ಬಿರುಕು ಬಹಿರಂಗಗೊಂಡಿದೆ.

ಕಾಂಗ್ರೆಸ್ ಶಾಸಕ ಹಾಗೂ ಎನ್‌ಟಿಆರ್ ಅವರ ಹಿರಿಯಳಿಯ ಡಿ.ವೆಂಕಟೇಶ್ವರ ರಾವ್ ಅವರು ಈಗ ಸ್ಪೋಟಕ ಮಾತುಗಳನ್ನಾಡುವ ಮೂಲಕ ತಮ್ಮ ಕುಟುಂಬದ ಬಿರುಕನ್ನು ಬಹಿರಂಗಪಡಿಸಿದ್ದಾರೆ. ಚಂದ್ರಬಾಬು ನಾಯ್ಡು ಅವರು 1995ರಲ್ಲಿ ಮುಖ್ಯಮಂತ್ರಿ ಪದವಿ ಆಸೆಗಾಗಿ ಎನ್‌ಟಿಆರ್ ಅವರ ವಿರುದ್ಧ ಹಿಂದಿನಿಂದಲೇ ಕತ್ತಿ ಮಸೆದರು ಎಂದು ದೂರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೆಂಕಟೇಶ್ವರ ರಾವ್, ನಾಯ್ಡು ಅವರು, ಎನ್‌ಟಿಆರ್ ಅಧಿಕಾರದಲ್ಲಿದ್ದಾಗ ಅವರನ್ನು ಕೆಳಗಿಳಿಸಿ ತಾನು ಆ ಸ್ಥಾನದಲ್ಲಿ ಕೂರಲು ನನಗೆ ಉಪಮುಖ್ಯಮಂತ್ರಿ ಸ್ಥಾನ ಕೊಡುವುದಾಗಿ ಮನವೊಲಿಸಿ ತನ್ನ ಕಡೆಗೆ ಸೆಳೆಯಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದರು.

ಇದೇ ಸಂದರ್ಭ ವೆಂಕಟೇಶ್ವರ ರಾವ್, 1995ರ ಘಟನಾವಳಿಗಳನ್ನು ಒಳಗೊಂಡ ಪುಸ್ತಕವೊಂದನ್ನು ತಾನು ಬರೆದಿದ್ದು, ಚುನಾವಣೆ ಮುಗಿದ ತಕ್ಷಣ, ಪರಿಸ್ಥಿತಿ ಸಮತೋಲನಕ್ಕೆ ಬಂದ ನಂತರ ಬಿಡುಗಡೆ ಮಾಡುವುದಾಗಿ ತಿಳಿಸಿದರು. 'ದಿ ಅದರ್ ಸೈಡ್ ಆಫ್ ದಿ ಟ್ರುತ್' ಎಂಬ ಪುಸ್ತಕ ಇದಾಗಿದ್ದು, ಇದು ತೆಲುಗು ಹಾಗೂ ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ.

ವೆಂಕಟೇಶ್ವರ ರಾವ್ ಅವರು ಎನ್‌ಟಿಆರ್ ಅವರ ಪುತ್ರ ಹಾಗೂ ನಟ ಎನ್.ಬಾಲಕೃಷ್ಣ ಅವರಿಗೆ ಬಹಿರಂಗ ಪತ್ರ ಬರೆದಿದ್ದು, ಅದರಲ್ಲಿ ಈ ಪುಸ್ತಕದ ಕೆಲವು ಭಾಗಗಳನ್ನು ವಿವರಿಸಿದ್ದಾರೆ. ಎನ್‌ಟಿಆರ್ ತನ್ನ ಕೊನೆಯ ದಿನಗಳಲ್ಲಿ ತನ್ನ ಮಗ ಬಾಲಕೃಷ್ಣರನ್ನು ಕರೆದು, 'ಚಂದ್ರಬಾಬು ನಾಯ್ಡವನ್ನು ಕೊಂದುಬಿಡು, ಆತ ವಿಶ್ವಾಸಘಾತುಕ' ಎಂದು ಹೇಳಿದ್ದಾಗಿಯೂ ಬರೆಯಲಾಗಿದೆ.

ವೆಂಕಟೇಶ್ವರ ರಾವ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿಯೂ, ಎನ್‌ಟಿಆರ್ ಅವರ ಇನ್ನೊಬ್ಬ ಮಗ ಹರಿಕೃಷ್ಣ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡುವುದಾಗಿಯೂ ಚಂದ್ರಬಾಬು ಆಕರ್ಷಿಸಿದ್ದರು ಎಂದು ಪತ್ರದಲ್ಲಿ ಹೇಳಲಾಗಿದೆ.

'ವೈಸ್‌ರಾಯ್ ಹೊಟೇಲಿನಲ್ಲಿ ಆಗ ಚಂದ್ರಬಾಬು ನಾಯ್ಡು ಈ ಕ್ಷಿಪ್ರ ಕಾರ್ಯಾಚರಣೆಯ ರೂಪುರೇಷೆ ಸಿದ್ಧಪಡಿಸಿದ್ದರು. ಆಗ ನನ್ನ ಹೆಂಡತಿ ಅಲ್ಲಿಗೆ ಹೋಗಬೇಡಿ ಎಂದು ಗೋಗರೆದಳು. ಆದರೆ ನಾನು ಅವಳ ಮಾತು ಕೇಳದೆ ಹೋಗಿ ತಪ್ಪು ಮಾಡಿದೆ' ಎಂದೂ ವೆಂಕಟೇಶ್ವರ ರಾವ್ ತಮ್ಮ ಪತ್ರದ ಸಾರಾಂಶದಲ್ಲಿ ತಿಳಿಸಿದ್ದಾರೆ.

'ಕೊನೆಗೂ ಚಂದ್ರಬಾಬು ನಾಯ್ಡು ಅವರು 15 ದಿನಗಳ ಕ್ಷಿಪ್ರ ಕಾರ್ಯಾಚರಣೆಯ ನಂತರವೂ ಅವರು ಮತ್ತೆ ಎನ್‌ಟಿಆರ್ ಬಳಿ ಮರಳಿದರು. ದೇವರು ದೊಡ್ಡವನು. ಎನ್‌ಟಿಆರ್ ಅವರ ಕೊನೆಯ ದಿನಗಳಲ್ಲಿ ನಾಯ್ಡು ಮತ್ತೆ ಜತೆಯಾದರು' ಎಂದರು.

ವೆಂಕಟೇಶ್ವರ ರಾವ್ ಅವರ ಪತ್ನಿ ಹಾಗೂ ಎನ್‌ಟಿಆರ್ ಪುತ್ರಿ ಪುರಂದರೇಶ್ವರಿ ಅವರೂ ಕಾಂಗ್ರೆಸ್ ಸಂಸದೆ ಹಾಗೂ ಕೇಂದ್ರ ಮಂತ್ರಿಯಾಗಿದ್ದಾರೆ. ತೆಲುಗಿನ ಖ್ಯಾತ ನಟಸಾರ್ವಭೌಮ ಎಂದೇ ಹೆಸರು ಪಡೆದ ಎನ್‌ಟಿಆರ್ ಅವರು ತೆಲುಗು ದೇಶಂ ಎಂಬ ಪಕ್ಷವನ್ನು ಕಟ್ಟಿ ಒಂಭತ್ತೇ ತಿಂಗಳಲ್ಲಿ ಮುಖ್ಯಮಂತ್ರಿಯೂ ರಾಜಕೀಯ ಕ್ಷೇತ್ರದಲ್ಲೇ ಮೈಲಿಗಲ್ಲು ಸ್ಥಾಪಿಸಿದ್ದರು. 1996ರಲ್ಲಿ ಅವರು ಹೃದಯಾಘಾತದಿಂದ ಮರಣ ಹೊಂದಿದರು.