ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಆಯೋಗ-ಬಿಜೆಪಿ ನಡುವಿನ ಯುದ್ಧ ತಾರಕಕ್ಕೆ
ಮತಸಮರ
PTI
ಬಿಜೆಪಿ ಪಕ್ಷದ ಪಿಲಿಭಿತ್ ಅಭ್ಯರ್ಥಿ ವರುಣ್ ಗಾಂಧಿ ಅವರ ದ್ವೇಷ ಭಾಷಣದಿಂದ ಉದ್ಭವಿಸಿರುವ ವಿವಾದವು ಇದೀಗ ಚುನಾವಣಾ ಆಯೋಗ ಹಾಗೂ ಬಿಜೆಪಿ ನಡುವೆ ಪೂರ್ಣ ಪ್ರಮಾಣದ ಯುದ್ಧವನ್ನು ಹುಟ್ಟು ಹಾಕಿದೆ.

ಅಭ್ಯರ್ಥಿಯೊಬ್ಬನನ್ನು ಕಣಕ್ಕಿಳಿಸಬೇಡಿ ಎಂಬುದಾಗಿ ಚುನಾವಣಾ ಆಯೋಗದಿಂದ ಹೇಳಿಸಿಕೊಂಡಿರುವ ಮೊದಲ ಪಕ್ಷ ಬಿಜೆಪಿಯಾಗಿದೆ. ಇದು ಬಿಜೆಪಿಯನ್ನು ಕೆರಳಿಸಿದೆ. ಅಲ್ಲದೆ ವರುಣ್ ಗಾಂಧಿ ನಮ್ಮ ಗೌರವಾನ್ವಿತ ಅಭ್ಯರ್ಥಿ ಎಂದೂ ಹೇಳಿ, ವರುಣ್ ಅಭ್ಯರ್ಥಿತನವನ್ನು ಹಿಂತೆಗೆಯುವ ಪ್ರಶ್ನೆಯೇ ಇಲ್ಲ ಎಂದೂ ಸ್ಪಷ್ಟಪಡಿಸಿದೆ. ಅಲ್ಲದೆ ಈ ಪ್ರಕರಣದಲ್ಲಿ ಆಯೋಗವು ತನ್ನ ವ್ಯಾಪ್ತಿ ಮೀರಿ ವರ್ತಿಸಿದೆ ಎಂದೂ ಹೇಳಿದೆ.

ಬಿಜೆಪಿ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಅವರು "ಅಭ್ಯರ್ಥಿತನಕ್ಕೆ ಸಂಬಂಧಿಸಿದಂತೆ ವರುಣ್ ನಮ್ಮ ಅಭ್ಯರ್ಥಿಯಾಗಿಯೇ ಉಳಿಯಲಿದ್ದಾರೆ ಎಂಬುದಾಗಿ ಪುನರುಚ್ಚರಿಸುತ್ತೇನೆ" ಎಂಬುದಾಗಿ ಹೇಳಿದ್ದಾರೆ. ಅಲ್ಲದೆ ಅವರ ಪರವಾಗಿ ಪ್ರಚಾರ ಮಾಡುವುದಾಗಿಯೂ ತಿಳಿಸಿದ್ದಾರೆ.

ಈ ವಾದವಿವಾದವು ವೈಯಕ್ತಿಕ ಮಟ್ಟಕ್ಕೂ ಇಳಿದಿದೆ. ಬಲ್‌ಬೀರ್ ಪುಂಜ್ ಅವರು "ಚುನಾವಣಾ ಆಯುಕ್ತ ನವೀನ್ ಚಾವ್ಲಾ ಅವರಿಗೆ ಸೋನಿಯಾ ಗಾಂಧಿ ಕುಟುಂಬದೊಡನೆ ಯಾವರೀತಿಯ ಸಂಬಂಧ ಇತ್ತು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ" ಎಂದು ವ್ಯಂಗ್ಯವಾಡಿದ್ದಾರೆ.

ಏತನ್ಮಧ್ಯೆ, ವರುಣ್ ಸೋಮವಾರ ದಿನವಿಡಿ ಕ್ಯಾಮರಾಗಳ ಕಣ್ಣುಗಳಿಂದ ತಪ್ಪಿಸಿಕೊಂಡರು. ಅಲ್ಲದೆ, ಚುನಾವಣಾ ಆಯೋಗಕ್ಕೆ ಖಾರವಾದ ಪತ್ರಒಂದನ್ನು ಬರೆದಿದ್ದು, ಆರೋಪಿತ ದ್ವೇಷ ಭಾಷಣದ ಬಗ್ಗೆ ಚುನಾವಣಾ ಆಯೋಗವು ಅಸಹಜವೆಂಬಂತೆ ಅವಸರದ ನಿರ್ಧಾರ ಕ್ರಮ ಕೈಗೊಂಡಿದ್ದು, ರಾಜಕೀಯ ಒತ್ತಡದಿಂದ ಈ ರೀತಿ ಮಾಡುವಂತೆ ತೋರುತ್ತಿದೆ ಎಂದು ದೂರಿದ್ದಾರೆ.

ತನ್ನ ವಿರುದ್ಧವಿರುವ ಆರೋಪದ ಕುರಿತು ಸೂಕ್ತ ವಾದ ಮಂಡಿಸಲು ತನಗೆ ಅಥವಾ ತನ್ನ ಪ್ರತಿನಿಧಿಗೆ ನ್ಯಾಯಯುತ ಅವಕಾಶವನ್ನೂ ನೀಡಲಿಲ್ಲ ಎಂದು ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಆಪಾದಿಸಿರುವ ವರುಣ್ ಗಾಂಧಿ, ಸತ್ಯಾಂಶ ಖಚಿತಪಡಿಸಿಕೊಳ್ಳುವ ಯಾವುದೇ ರೀತಿಯ ಪ್ರಯತ್ನ ಮಾಡದೆ ಈ ರೀತಿಯ ಕಟುವಾದ ಕ್ರಮಕ್ಕೆ ಮುಂದಾಗಿರುವುದು ತೀರಾ ಆಘಾತಕಾರಿ ಎಂದು ಹೇಳಿದ್ದಾರೆ.