ಸಂಸದನೊಬ್ಬ ಪ್ರತಿವರ್ಷದ ತನ್ನ ಸಾಧನೆಗಳನ್ನು ಕ್ಷೇತ್ರದ ಜನರ ಮುಂದಿಡುವುದನ್ನು ಕೇಳಿದ್ದೀರಾ? ಹೋಗ್ರಿ, ಇದನೆಲ್ಲ ಭಾರತದಲ್ಲಿ ರಾಜಕಾರಣಿಗಳಿಂದ ನಿರೀಕ್ಷಿಸಲು ಸಾಧ್ಯವೇನು ಎಂದು ಮೂಗು ಮುರಿಯಬೇಡಿ. ಇಂಥವರೂ ಒಬ್ಬರಿದ್ದಾರೆ. ಅವರು ತಮಿಳ್ನಾಡಿನ ರಾಜಕಾರಣಿ.
ಪಾಟಾಳಿ ಮಕ್ಕಳ್ ಕಚ್ಚಿ(ಪಿಎಂಕೆ) ಸಂಸ್ಥಾಪಕ ಎಂ. ರಾಮದಾಸ್ ಅವರನ್ನು ಭೇಟಿಯಾಗಿ. ಇವರು ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದವರು. ಅರ್ಥಶಾಸ್ತ್ರ ಪ್ರೊಫೆಸರ್ ಆಗಿದ್ದು ಬಳಿಕ ರಾಜಕಾರಣಿಯಾಗಿ ಪರಿವರ್ತನೆಯಾದವರು. ಅವರು ರಾಜಕಾರಣದಲ್ಲಿ ಹೊಸ ಅಧ್ಯಾಯ ಬರೆಯುತ್ತಿದ್ದಾರೆ.
ಇವರು ಪುದುಚೇರಿಯ ಜನತೆಗೆ ಪ್ರತಿವರ್ಷ ತನ್ನ ಚಟುವಟಿಕೆಗಳು, ಕಾರ್ಯಕ್ಷಮತೆಯ ಕುರಿತು ಲೆಕ್ಕ ಒಪ್ಪಿಸುತ್ತಿದ್ದಾರೆ. ಜನತೆಗೆ ವರದಿ ಒಪ್ಪಿಸುತ್ತಿದ್ದ ಹಾಲಿ ಲೋಕಸಭೆಯಿಂದ ಹೊರತೆರಳುತ್ತಿರುವ, ಬಹುಶಃ ಭಾರತದ ಏಕೈಕ ಸಂಸದ ಇವರಾಗಿದ್ದಾರೆ.
ಇದು ನಿಮ್ಮ ಶೈಕ್ಷಣಿಕ ಕ್ಷೇತ್ರದ ಕೊಡುಗೆಯೇ ಎಂಬುದಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು "ಜನತೆಗೆ ನನ್ನ ಕಾರ್ಯಚಟುವಟಿಕೆಗಳ ಕುರಿತು ವರದಿ ಒಪ್ಪಿಸುವುದು ನನ್ನ ಕರ್ತವ್ಯ ಎಂಬುದು ನನಗನಿಸಿತು. ನನ್ನ ಜನತೆಗೆ ಉತ್ತರದಾಯಿಯಾಗಿರಲು ನಾನು ಬಯಸುತ್ತೇನೆ" ಅಂತಾರೆ.
ಪುದುಚೇರಿಗೆ ತಾನು ತಂದಿರುವ ಅಭಿವೃದ್ಧಿ ಯೋಜನೆಗಳು, ಲೋಕಸಭೆಯಲ್ಲಿ ತಾನು ಭಾಗವಹಿಸಿದ ಚರ್ಚೆಗಳು, ಸಂಸತ್ತಿನಲ್ಲಿ ತನ್ನ ಹಾಜರಿ, ಸಂಸದರ ನಿಧಿಯ ಬಳಕೆ, ತಾನು ನಡೆಸಿದ ಪ್ರತಿಭಟನೆಗಳು ಹಾಗೂ ತಾನು ಭಾಗವಹಿಸಿದ ಸಾಮಾಜಿಕ ಕಾರ್ಯಕ್ರಮಗಳ ಪಟ್ಟಿಯನ್ನೂ ಅವರು ಜನತೆಗೆ ನೀಡುತ್ತಾರೆ.
ಮೀನುಗಾರ ಸಮುದಾಯದಿಂದ ಬಂದಿರುವ ರಾಮದಾಸ್ ಅವರ ಹೇಳಿಕೆಯಂತೆ, ಅವರು ಸಂಸತ್ತಿನಲ್ಲಿ 151 ಚರ್ಚೆಗಳಲ್ಲಿ ಭಾಗವಹಿಸಿದ್ದು, 380 ಪ್ರಶ್ನೆಗಳನ್ನು ಕೇಳಿದ್ದಾರೆ. ಮತ್ತು ಶೇ.94ರಷ್ಟು ಹಾಜರಿಯನ್ನು ಗಳಿಸಿದ್ದಾರೆ.