ರಾಯ್ ಬರೇಲಿ ಹಾಗೂ ಅಮೇಠಿ ಕ್ಷೇತ್ರಗಳಲ್ಲಿ ಬಿಜೆಪಿಯು ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತಿದೆ. ಸೋನಿಯಾ ಗಾಂಧಿಯವರ ಎದುರಿಗೆ ರಾಕೇಶ್ ಬಹಾದ್ದೂರ್ ಸಿಂಗ್ ಹಾಗೂ ರಾಹುಲ್ ಗಾಂಧಿ ವಿರುದ್ಧ ಪ್ರದೀಪ್ ಸಿಂಗ್ ಅವರು ಬಿಜೆಪಿ ವತಿಯಿಂದ ಚುನಾವಣೆಗೆ ಸ್ಫರ್ಧಿಸಲಿದ್ದಾರೆ.
ರಾಕೇಶ್ ಬಹಾದ್ದೂರ್ ಅವರು ರಾಯ್ಬರೇಲಿ ಜಿಲ್ಲಾ ಬಿಜೆಪಿ ಮುಖ್ಯಸ್ಥರಾಗಿದ್ದು, ಪ್ರಥಮ ಬಾರಿಯಾಗಿ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಅದೇ ರೀತಿ 32ರ ಹರೆಯದ ಪ್ರದೀಪ್ ಸಿಂಗ್ ಅವರದ್ದು ಅಖಾಡಕ್ಕೆ ಫಸ್ಟ್ ಎಂಟ್ರಿ.
"ಈ ಸರ್ತಿ ನಾವು ಹೊರಗಿನ ಅಭ್ಯರ್ಥಿಗಳ ಬದಲಿಗೆ ಸ್ಥಳೀಯ ನಾಯಕರಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದೇವೆ. ಇಬ್ಬರೂ ಯುವಕರು ಮತ್ತು ಗೆಲುವಿಗಾಗಿ ಕಠಿಣ ಪರಿಶ್ರಮ ಪಡಲಿದ್ದಾರೆ" ಎಂದು ಪಕ್ಷದ ನಿಲುವನ್ನು ಸಮರ್ಥಿಸಿಕೊಂಡಿರುವ ಉತ್ತರ ಪ್ರದೇಶದ ಬಿಜೆಪಿ ನಾಯಕ ಕಲ್ರಾಜ್ ಮಿಶ್ರಾ ಹೇಳಿದ್ದಾರೆ.