ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಸೀಟಿಗಾಗಿ ಆತ್ಮಹತ್ಯೆ ಯತ್ನ, ಕಚೇರಿಗೆ ಬೆಂಕಿ!
ಮತಸಮರ
ಚುನಾವಣೆಗಳು ಎಷ್ಟರ ಮಟ್ಟಿಗೆ "ಜನ ಸೇವಾ" ಆಕಾಂಕ್ಷಿಗಳ ಮನಸ್ಸಿನಲ್ಲಿ ಬಲವಾಗಿ ಬೇರೂರಿದೆಯೆಂದರೆ, ತಮ್ಮ ನಾಯಕನಿಗೆ ಸ್ಪರ್ಧೆಗಾಗಿ ಟಿಕೆಟ್ ಗಿಟ್ಟಿಸಲಾಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಒಂಬತ್ತು ಪ್ರಕರಣಗಳು ಆಂಧ್ರಪ್ರದೇಶದಿಂದ ವರದಿಯಾಗಿವೆ.

ಮುಂದಿನ ತಿಂಗಳು ಆಂಧ್ರದಲ್ಲಿ ನಡೆಯುವ ವಿಧಾನಸಭೆ ಚುನಾವಣೆಗಳಿಗೆ ತೆಲುಗು ದೇಶಂ ಪಾರ್ಟಿ (ಟಿಡಿಪಿ) 91 ಮಂದಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ತಮ್ಮ ನಾಯಕರ ಹೆಸರಿಲ್ಲ ಎಂಬ ಕಾರಣಕ್ಕೆ ಕಾರ್ಯಕರ್ತರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಅನಂತಪುರ ಜಿಲ್ಲೆಯ ಇಬ್ಬರು ಟಿಡಿಪಿ ಕಾರ್ಯಕರ್ತರು, ಪಕ್ಷದ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಿವಾಸದೆದುರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದರೆ, ಕರೀಂನಗರದಲ್ಲಿಯೂ ಆರು ಮಂದಿ ಸಾಯುವ ಪ್ರಯತ್ನ ಮಾಡಿದ್ದಾರೆ.

ಇಬ್ಬರು ವಿಷ ಸೇವಿಸಿದ್ದರೆ, ಮತ್ತೊಬ್ಬ ಬ್ಲೇಡಿನಿಂದ ತಮ್ಮ ಕೈಗೆ ಗೀರಿಕೊಂಡಿದ್ದಾನೆ. ಇನ್ನಿಬ್ಬರು ಬೆಂಕಿ ಹಚ್ಚಿಕೊಂಡಾಗ ಇತರರು ಅವರನ್ನು ರಕ್ಷಿಸಿದರು. ಇನ್ನಿಬ್ಬರು ಸ್ಥಳೀಯ ಮುಖಂಡರಂತೂ ತಮ್ಮ ಪಕ್ಷದ ಕಚೇರಿಯ ಕಟ್ಟಡ ಮೇಲೇರಿ, ಕರೀಂನಗರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ನಾಯಕ ಕಮಲಾಕರ ಅವರ ಬದಲು ಹೊರಗಿನವರಿಗೆ ಟಿಕೆಟ್ ನೀಡಿದರೆ, ಕೆಳಗೆ ಹಾರಿ ಸಾಯುವುದಾಗಿ ಬೆದರಿಕೆಯೊಡ್ಡಿದರು. ಈ ಕ್ಷೇತ್ರಕ್ಕೆ ಟಿಡಿಪಿ ಇನ್ನೂ ಅಭ್ಯರ್ಥಿ ಘೋಷಿಸಿಲ್ಲ.

ಈ ನಡುವೆ, ಮೆಹಬೂಬನಗರ ಜಿಲ್ಲೆಯ ಟಿಡಿಪಿ ಕಾರ್ಯಕರ್ತರಂತೂ, ವನಪತಿ ಅಸೆಂಬ್ಲಿ ಕ್ಷೇತ್ರವನ್ನು ಟಿಡಿಪಿಯ ಮಿತ್ರಪಕ್ಷವಾಗಿರುವ ಟಿಆರ್ಎಸ್‌ಗೆ ಬಿಟ್ಟುಕೊಟ್ಟಿರುವುದನ್ನು ವಿರೋಧಿಸಿ, ತಮ್ಮದೇ ಪಕ್ಷದ ಕಚೇರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.