ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ, 2004ರಲ್ಲಿ ಬಿಜೆಪಿ ನೇತೃತ್ವದ ಮಿತ್ರಕೂಟವಾದ ಎನ್‌ಡಿಎಗೆ ಬಂದ ಪರಿಸ್ಥಿತಿಯನ್ನೇ ಕಾಂಗ್ರೆಸ್ ನೇತೃತ್ವದ ಆಡಳಿತಾರೂಢ ಯುಪಿಎ ಎದುರಿಸತೊಡಗುತ್ತಿದೆ. ಹೊಚ್ಚ ಹೊಸದಾಗಿ ಪಿಎಂಕೆ ಮಿತ್ರಕೂಟದಿಂದ ಹೊರಬಿತ್ತು. ಇದಕ್ಕೆ ಮುನ್ನ ಆರ್‌ಜೆಡಿ ಮತ್ತು ಎಲ್‌ಜೆಪಿ ಪಕ್ಷಗಳು ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಲೋಕಸಭೆ ಚುನಾವಣೆಗಾಗಿ ಸಮಾಜವಾದಿ ಪಕ್ಷದ ಜೊತೆ ಕೈಜೋಡಿಸಿಕೊಂಡವು.
ಇದಕ್ಕೂ ಮೊದಲು ಎಂಡಿಎಂಕೆ, ಟಿಆರ್ಎಸ್ ಮತ್ತು ಪಿಡಿಪಿ ಪಕ್ಷಗಳು ಕೇಂದ್ರದ ಮಿತ್ರಕೂಟದಿಂದ ಹೊರನಡೆದಿದ್ದವು.
2004ರಲ್ಲಿ ಎನ್‌ಡಿಎಗೂ ಇದೇ ಗತಿಯಾಗಿತ್ತು. ಚುನಾವಣೆಗೆ ಕೆಲವೇ ದಿನಗಳ ಮೊದಲು ಹಲವಾರು ಪಕ್ಷಗಳು ಬಿಜೆಪಿಗೆ ವಿಚ್ಛೇದನ ನೀಡಿದ್ದವು.
ಕಳೆದ ಬಾರಿಯ ಚುನಾವಣೆ ಸಂದರ್ಭ ಘಟಿಸಿದ ಸಂಗತಿಗಳೂ ಸ್ವಾರಸ್ಯಕರವಾಗಿವೆ. ಸ್ವತಃ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 'ಜಾತ್ಯತೀತ' ಪಕ್ಷಗಳನ್ನು ಒಂದುಗೂಡಿಸುವ ನಿಟ್ಟಿನಲ್ಲಿ ತಾವಾಗಿಯೇ ಹಲವಾರು ಪಕ್ಷಗಳ ಕದ ತಟ್ಟಿದ್ದರು.
ದೆಹಲಿಯಲ್ಲಿ ಎಲ್‌ಜೆಪಿ ನಾಯಕ ರಾಮ ವಿಲಾಸ್ ಪಾಸ್ವಾನ್, ವಿದೇಶೀ ಮೂಲದ ವಿಷಯದಲ್ಲಿ ಕಾಂಗ್ರೆಸಿನಿಂದ ಹೊರಬಂದು ಎನ್‌ಸಿಪಿ ಕಟ್ಟಿಕೊಂಡಿದ್ದ ಅದರ ಮುಖ್ಯಸ್ಥ ಶರದ್ ಪವಾರ್ ಮತ್ತು ಡಿಎಂಕೆಯ ಹಿರಿಯ ಎಂ.ಕರುಣಾನಿಧಿ ಮತ್ತಿತರರ ಮನೆಬಾಗಿಲಿಗೇ ಹೋಗಿದ್ದ ಸೋನಿಯಾ ಗಾಂಧಿ, ಸಮ್ಮಿಶ್ರ ಸರಕಾರಕ್ಕೆ ವೇದಿಕೆಯೊಂದನ್ನು ರೂಪಿಸಿದ್ದರು.
ಗೋಧ್ರಾ ಘಟನೆ ಸಂದರ್ಭ ಎನ್‌ಡಿಎ ಶಿಬಿರದಿಂದ ಹೊರಬಿದ್ದ ಮೊದಲ ಪಕ್ಷವೆಂದರೆ ಪಾಸ್ವಾನ್ ಅವರ ಎಲ್‌ಜೆಪಿ. ಆ ಬಳಿಕ ಕೇಸರಿ ಮಿತ್ರಕೂಟದಲ್ಲಿದ್ದ ಪಿಎಂಕೆ, ಎಂಡಿಎಂಕೆ, ಡಿಎಂಕೆ, ಐಎನ್ಎಲ್‌ಡಿ ಮತ್ತು ಆರ್ಎಲ್‌ಡಿಗಳು ಕೂಡ ಟಾಟಾ ಹೇಳಿದ್ದವು. ಇದು ಎನ್‌ಡಿಎ ಮೇಲೆ ಚುನಾವಣೆಗಳಲ್ಲಿ ಭಾರೀ ಪರಿಣಾಮ ಬೀರಿದ್ದು ಈಗ ಇತಿಹಾಸ.
ಹೀಗೆ ಎನ್‌ಡಿಎ ತೊರೆದವುಗಳಲ್ಲಿ, ನಮಗೆ ಯಾರಾದರೂ ಆಗುತ್ತದೆ ಎಂದು ಯುಪಿಎ ಸೇರಿಕೊಂಡವುಗಳೆಂದರೆ ತಮಿಳುನಾಡಿನ ಪಕ್ಷಗಳಾದ ಪಿಎಂಕೆ, ಎಂಡಿಎಂಕೆ ಮತ್ತು ಡಿಎಂಕೆ. ಪಾಸ್ವಾನ್ ಅವರ ಎಲ್‌ಜೆಪಿಯಂತೂ ಮೊದಲೇ ಸೇರಿಕೊಂಡಿತ್ತು.
ನಾಲ್ಕು ವರ್ಷ ಎಲ್ಲವೂ ಸರಿಯಾದಂತಿದ್ದ ಯುಪಿಎಗೆ ಮೊದಲ ಹೊಡೆತ ಬಿದ್ದದ್ದು ಕಳೆದ ವರ್ಷ, ಅಷ್ಟೂ ವರ್ಷ ಹೊರಗಿನಿಂದ ಬೆಂಬಲ ನೀಡುತ್ತಾ ಸರಕಾರಕ್ಕೆ ಆಧಾರವಾಗಿದ್ದ ಎಡಪಕ್ಷಗಳಿಂದ. ಭಾರತ-ಅಮೆರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿ ಅವುಗಳು ಹೊರಬಂದಾಗ, ಕಟ್ಟಾ ವಿರೋಧಿಯಾದ ಮುಲಾಯಂ ಸಿಂಗ್ ಅವರ ಸಮಾಜವಾದಿ ಪಕ್ಷದ ಬೆಂಬಲ 'ಗಳಿಸಿ'ಕೊಂಡ ಕಾಂಗ್ರೆಸ್, ಇಡೀ ದೇಶವೇ ತಲೆ ತಗ್ಗಿಸಬೇಕಾಗಿ ಬಂದ ಸಂಸತ್ತಿನಲ್ಲಿ 'ವೋಟಿಗಾಗಿ ನೋಟು' ಪ್ರಕರಣದ ಬಳಿಕ ಸರಕಾರ ಉಳಿಸಿಕೊಂಡದ್ದು ಈಗ ಇತಿಹಾಸ. ರಾಷ್ಟ್ರಪತಿ ಚುನಾವಣೆಗಳಲ್ಲಿ ಕಾಂಗ್ರೆಸಿಗೆ ಬೆಂಬಲ ನೀಡಿದ್ದ ಮಾಯಾವತಿಯವರ ಬಿಎಸ್ಪಿ ಕೂಡ ಅಂದು ಯುಪಿಎಯನ್ನು ವಿರೋಧಿಸಿತ್ತು.
ನಂತರ ತೆಲಂಗಣ ರಾಷ್ಟ್ರ ಸಮಿತಿ (ಟಿಆರ್ಎಸ್) ಕೂಡ ಪ್ರತ್ಯೇಕ ರಾಜ್ಯದ ಕೂಗಿನೊಂದಿಗೆ ಯುಪಿಎಯಿಂದ ಹೊರಬಿತ್ತು. ವೈಕೋ ನೇತೃತ್ವದ ಎಂಡಿಎಂಕೆ 2006ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆಗಳಿಗೆ ಮುನ್ನ, ಶ್ರೀಲಂಕಾ ತಮಿಳರ ವಿಷಯ ಹಿಡಿದುಕೊಂಡು ಯುಪಿಎ ಕೂಟದಿಂದ ಹೊರ ಬಂತು.
ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗಳಿಗೆ ಮುನ್ನ ಪಿಡಿಪಿ ಹೊರ ನಡೆಯಿತು. ಇದಕ್ಕೆ ಕಾರಣ ಕಾಂಗ್ರೆಸ್ ಪಕ್ಷವು ಕಾಶ್ಮೀರದಲ್ಲಿ ಪಿಡಿಪಿ ಕೂಟದಿಂದ ಹೊರ ಬಂದದ್ದು. ವಿಧಾನಸಭೆ ಚುನಾವಣೆಗಳ ಬಳಿಕ ಕಾಂಗ್ರೆಸ್ ಪಕ್ಷವು ಅಲ್ಲಿ ಕೈಜೋಡಿಸಿದ್ದ ನ್ಯಾಷನಲ್ ಕಾನ್ಫರೆನ್ಸ್, ಈಗ ಯುಪಿಎಯ ಭಾಗವಾಗಿದೆ.
ಇದೀಗ, ಯುಪಿಎಯ ಅಸ್ತಿತ್ವ ಸದ್ಯಕ್ಕೆ ಅಪಾಯದಲ್ಲಿದೆ ಎನ್ನಬಹುದು. ಆದರೆ, ರಾಜಕೀಯದಲ್ಲಿ ಅಧಿಕಾರವೇ ಮುಖ್ಯವಾಗಿರುವುದರಿಂದ ಯಾರಿಗೆ ಯಾರು ಕೂಡ ಶತ್ರುಗಳಲ್ಲ, ಮಿತ್ರರೂ ಅಲ್ಲ ಎಂಬೊಂದು ಅಲಿಖಿತ ವೇದ ವಾಕ್ಯವಿದೆ. ಹೀಗಾಗಿ ಚುನಾವಣೆಗಳು ನಡೆದು ಫಲಿತಾಂಶ ಹೊರಬಿದ್ದ ಬಳಿಕ ಮತ್ತೊಂದು ಸುತ್ತಿನಲ್ಲಿ 'ರಾಜಕೀಯ ಧ್ರುವೀಕರಣ' ನಡೆಯುವುದಂತೂ ಖಚಿತ.