ಸೀಟು ಹಂಚಿಕೆಯ ಅಸಮಾಧಾನದಿಂದ ಕೇಂದ್ರದ ಯುಪಿಎ ನೇತೃತ್ವದ ಕಾಂಗ್ರೆಸ್ ಬಿಕ್ಕಟ್ಟಿಗೆ ಸಿಲುಕಿರುವಂತೆಯೇ, ರಾಜ್ಯ ರಾಜಕಾರಣದಲ್ಲೂ ಅದರ ಬಿಸಿ ತಟ್ಟಿದ್ದು, ಕಾಂಗ್ರೆಸ್‌ನ ಘಟಾನುಘಟಿ ಹಿರಿಯ ಮುಖಂಡರು ಬಿಜೆಪಿ ಪಾಳಯಕ್ಕೆ ಸೇರ್ಪಡೆಗೊಳ್ಳಲು ಮುಹೂರ್ತ ನಿಗದಿ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಒಗ್ಗಟ್ಟಿನಿಂದ ಇರುವುದಾಗಿ ಈ ಮೊದಲು ಕಾಂಗ್ರೆಸ್ ನಾಯಕರು ಹೇಳಿದ್ದರು ಕೂಡಾ ಇದೀಗ ಕಾಂಗ್ರೆಸ್‌ನ ಹಿರಿಯ ಮುಖಂಡರು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ. ಅಷ್ಟೇ ಅಲ್ಲ ಕೆಲ ಮುಖಂಡರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕಳೆದ 20-30ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ನಿಷ್ಠರಾಗಿ ಕಾರ್ಯನಿರ್ವಹಿಸಿದ್ದರು ಕೂಡ ಯಾವುದೇ ಬೆಲೆ ಇಲ್ಲದಂತಾಗಿದೆ. ಎಲ್ಲಿ ನಮಗೆ ಸೂಕ್ತ ಸ್ಥಾನಮಾನ ದೊರೆಯುವುದೋ ಅಲ್ಲಿಗೆ ಸೇರ್ಪಡೆಗೊಳ್ಳುವುದು ಅನಿವಾರ್ಯ ಎಂಬುದಾಗಿ ಬಂಡಾಯದ ಬಾವುಟ ಹಾರಿಸಿರುವ ಹಿರಿಯ ಮುಖಂಡರು ಹೈಕಮಾಂಡ್‌ಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ಡಿ.ಬಿ.ಚಂದ್ರೇಗೌಡ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಚೆ ಹೊಂದಿದ್ದ ಡಿ.ಬಿ.ಚಂದ್ರೇಗೌಡರಿಗೆ ಆ ಕ್ಷೇತ್ರ ಕೈತಪ್ಪಿ ಹೋಗಿರುವುದು ಪಕ್ಷದ ಮೇಲಿನ ಅಸಮಾಧಾನಕ್ಕೆ ಕಾರಣ ಎನ್ನುವುದು ಪಕ್ಷದ ಮೂಲಗಳ ಪಿಸುಮಾತು. ಪಕ್ಷದಲ್ಲಿ ಸೂಕ್ತ ಗೌರವ, ಬೆಲೆ ಸಿಗುತ್ತಿಲ್ಲ ಎಂದು ನೇರವಾಗಿ ಆರೋಪಿಸಿರುವ ಹಿರಿಯ ಮುಖಂಡ ಗೌಡರು, ಮುಖ್ಯಮಂತ್ರಿ ಯಡಿಯೂರಪ್ಪನವರ ಪಡಸಾಲೆಯಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ನಿರ್ಧಾರವನ್ನು ಶೀಘ್ರವೇ ಬಹಿರಂಗಗೊಳಿಸುವುದಾಗಿಯೂ ತಿಳಿಸಿದ್ದಾರೆ. ಒಂದು ಮೂಲದ ಪ್ರಕಾರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಡಿ.ಬಿ.ಚಂದ್ರೇಗೌಡರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂಬ ಊಹಾಪೋಹ ಇದೆ.
ಸಿ.ಪಿ.ಯೋಗಿಶ್ವರ್: ಕೆಪಿಸಿಸಿ ಕಾರ್ಯಾಧ್ಯಕ್ಷ ಡಿಕೆಶಿ ಹಾಗೂ ಶಾಸಕ ಸಿ.ಪಿ.ಯೋಗಿಶ್ವರ ಮುಸುಕಿನ ಗುದ್ದಾಟದಿಂದಾಗಿ ಬಹಿರಂಗವಾಗಿಯೇ ಸಡ್ಡು ಹೊಡೆದಿರುವ ಸಿಪಿ, ಗುರುವಾರ ಮುಖ್ಯಮಂತ್ರಿ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಚನ್ನಪಟ್ಟಣದಿಂದ ಕಾಂಗ್ರೆಸ್ ಟಿಕೆಟ್ ಪಡೆದು ವಿಧಾನಸಭೆಗೆ ಪ್ರವೇಶ ಪಡೆದಿದ್ದ ನಟ ಸಿ.ಪಿ.ಯೋಗಿಶ್ವರ ಯುಗಾದಿ ನಂತರ ಬಿಜೆಪಿ ಸೇರ್ಪಡೆಗೊಳ್ಳುವುದಾಗಿ ಘೋಷಿಸಿದ್ದಾರೆ.
ಅಂಬರೀಶ್: ಮಂಡ್ಯದ ಗಂಡು 'ರೆಬೆಲ್ ಸ್ಟಾರ್' ಅಂಬರೀಶ್ ಕೂಡ ಈಗಾಗಲೇ ಕೈ ಪಾಳಾಯದಿಂದ ಒಂದು ಕಾಲನ್ನು ಹೊರಗಿಟ್ಟಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ಪೂರ್ಣಗೊಳಿಸಿದ್ದು, ತಾನು ಕೂಡ ಶೀಘ್ರವೇ ತನ್ನ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದರು. ಅಲ್ಲದೇ ತಾನು ಸ್ಪರ್ಧಿಸುವುದಾದರೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾತ್ರ ಎಂಬುದಾಗಿಯೂ ಹೈಕಮಾಂಡ್‌ಗೆ ತಿಳಿಸಿರುವುದಾಗಿ ವಿವರಣೆ ನೀಡಿದ್ದು, ಅಂಬಿ ಕೂಡ ಹೈಕಮಾಂಡ್‌ನ ನುಡಿಮುತ್ತಿಗಾಗಿ ಕಾಯುತ್ತಿದ್ದಾರೆ.
ಅದೇ ರೀತಿ ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಜಾಫರ್ ಷರೀಫ್, ಮಾಜಿ ಸಚಿವ ವಿ.ಸೋಮಣ್ಣ, ವಿಧಾನಪರಿಷತ್‌ನ ಮಾಜಿ ಸದಸ್ಯ ಕೆ.ಎಚ್. ಶ್ರೀನಿವಾಸ್ ಕೂಡ ಬಂಡಾಯದ ಬಾವುಟ ಹಾರಿಸಿದ್ದಾರೆ. ವಿ.ಸೋಮಣ್ಣ ಅವರ ಪುತ್ರ, ಬೆಂಬಲಿಗರು ಬಿಜೆಪಿ ಪಾಳಯಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಒಟ್ಟಾರೆಯಾಗಿ ಕಾಂಗ್ರೆಸ್‌ನ ಅತಿರಥ ಮಹಾರಥರು ಬಿಜೆಪಿಯ ಮೊಗಸಾಲೆಯಲ್ಲಿ ಕಾಣಿಸಿಕೊಳ್ಳು ಮೂಲಕ ಕಾಂಗ್ರೆಸ್‌ಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದ್ದಾರೆ.