ಕೋಮು ಪ್ರಚೋದಕ ಭಾಷಣಕ್ಕೆ ಸಂಬಂಧಿಸಿದಂತೆ ದೆಹಲಿ ಉಚ್ಚ ನ್ಯಾಯಾಲಯದಿಂದ ಜಾಮೀನು ಅರ್ಜಿ ವಾಪಸು ಪಡೆದಿರುವ ಬಿಜೆಪಿ ನಾಯಕ ವರುಣ್ ಗಾಂಧಿ ಶನಿವಾರ ಮಧ್ನಾಹ್ನ ಪಿಲಿಭಿಟ್ ನ್ಯಾಯಾಲಯಕ್ಕೆ ಶರಣಾಗಿದ್ದು, ಅವರ ಬೆಂಬಲಿಗರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ಈ ಮಧ್ಯೆ, ಪೊಲೀಸ್ ವಾಹನಗಳ ಮೇಲೂ ಕಲ್ಲು ತೂರಲಾಗಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಗುಂಡುಹಾರಾಟ ಮಾಡಿದ್ದು, ಲಾಠಿಪ್ರಹಾರವನ್ನೂ ನಡೆಸಲಾಯಿತು.
ಜೈಲಿನಲ್ಲಿ ತಮ್ಮ ಮಗ ವರುಣ್ ಗಾಂಧಿಯನ್ನು ನೋಡಲು ಬಂದ ಫಿಲಿಬಿಟ್ ಕ್ಷೇತ್ರದ ಹಾಲಿ ಸಂಸದೆ ಮನೇಕಾ ಗಾಂಧಿ, ಈ ಬಗ್ಗೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ ಪೊಲೀಸರು ನರಮೇಧ ನಡೆಸಲು ಪ್ರಯತ್ನಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಸುಮಾರು 45 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದು, ಅವರಲ್ಲಿ 25 ಮಂದಿ ಒಬ್ಬ ನಿರ್ದಿಷ್ಟ ಪೊಲೀಸ್ ಅಧಿಕಾರಿಯಿಂದಾಗಿಯೇ ಗಾಯಗೊಂಡರು ಎಂದು ಮನೇಕಾ ದೂರಿದರು.
ತಾನು ಜೈಲಿಗೆ ಹೋಗಲು ಸಿದ್ದ ಎಂಬ ಹೇಳಿಕೆ ಬಿಜೆಪಿಯಲ್ಲಿ ಸಂಚಲನ ಮೂಡಿಸಿತ್ತು. ಇಂದು ಬೆಳಿಗ್ಗೆ ನ್ಯಾಯಾಲಯಕ್ಕೆ ಶರಣಾಗಲು ಆಗಮಿಸಿದ ವರುಣ್ ಗಾಂಧಿ ಪಿಲಿಭಿಟ್ ಕ್ಷೇತ್ರದುದ್ದಕ್ಕೂ ವರುಣ್ ಹಾಗೂ ಬಿಜೆಪಿ ಬೆಂಬಲಿಗರಿಂದ ಅದ್ದೂರಿ ಸ್ವಾಗತದೊಂದಿಗೆ ಘೋಷಣೆ ಕೂಗಿದ್ದರು. ಸಂಜೆಯವರೆಗೂ ಈ ಘರ್ಷಣೆ ಮುಂದುವರಿದಿದ್ದು, ಪೊಲೀಸರು ಗಾಳಿಯಲ್ಲಿ ಗುಂಡು, ಅಶ್ರುವಾಯು ಸಿಡಿಸಿದರಲ್ಲದೆ, ಲಾಠಿ ಪ್ರಹಾರವನ್ನೂ ಮಾಡಿ ಪರಿಸ್ಥಿತಿ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಕಾರಾಗೃಹದೆದುರು ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ವರುಣ್ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದರು. ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವಂತೆ ಬಿಜೆಪಿ ಒತ್ತಾಯಿಸಿದೆ.
ವರುಣ್ ಗಾಂಧಿಗೆ ನ್ಯಾಯಾಲಯ ಸೋಮವಾರದವರೆಗೆ (ಮಾ.30) ನ್ಯಾಯಾಂಗ ಬಂಧನ ವಿಧಿಸಲಾಗಿದೆ.