ಚಾಪ್ರಾ(ಬಿಹಾರ): ರೈಲ್ವೇ ಸಚಿವ ಹಾಗೂ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರಿಗೆ ಯಾವುದೇ ಸ್ಥಿರಾಸ್ತಿ ಇಲ್ಲವಂತೆ. ಆದರೆ, ಅವರ ಹೆಂಡತಿ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಹಾಗೂ ಅವರ ಒಂಬತ್ತು ಮಕ್ಕಳಿಗೆ 1.2 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಯಿದೆಯಂತೆ.
ಇಷ್ಟೇ ಅಲ್ಲ. ರಾಬ್ರಿ ದೇವಿ ತನ್ನ ಗಂಡ ಲಾಲು ಅವರನ್ನು ತನ್ನ ಬ್ಯಾಂಕ್ ಠೇವಣಿಯ ವಿಚಾರದಲ್ಲೂ ಹಿಂದಿಕ್ಕಿದ್ದಾರೆ. ರಾಬ್ರಿಗೆ ಇರುವ ಬ್ಯಾಂಕ್ ಬ್ಯಾಲೆನ್ಸ್, ಫೈನಾನ್ಶಿಯಲ್ ಇನ್ಸ್ಟಿಟ್ಯೂಶನ್‌ಗಳು, ನಾನ್-ಬ್ಯಾಂಕಿಂಗ್ ಫೈನಾನ್ಶಿಯಲ್ ಕಂಪನಿಗಳಲ್ಲಿ 24 ಲಕ್ಷ ರುಪಾಯಿಗಳಿದ್ದರೆ, ಲಾಲುಗೆ ಇರುವುದು ಕೇವಲ 12.11 ಲಕ್ಷ ರೂ. ಲಾಲು ಪ್ರಸಾದ್ ಯಾದವ್ ಮುಂಬರುವ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಸಂದರ್ಭ ಈ ಆಸ್ತಿ ವಿವರಗಳು ಲಭ್ಯವಾಗಿವೆ. ಇದರ ಪ್ರಕಾರ ಅವರ ಮಕ್ಕಳ ಆಸ್ತಿ 39.58 ಲಕ್ಷ ರೂ.
ಅಫಿಡವಿಟ್ ಪ್ರಕಾರ, ರಾಬ್ರಿ ದೇವಿ ಅವರಿಗೆ 34.5 ಲಕ್ಷ ರೂಪಾಯಿ ಬೆಲೆ ಬಾಳುವ ಕೃಷಿ ಭೂಮಿಯಿದ್ದು, ಅವರ ಮಕ್ಕಳಿಗೆ 57.7 ಲಕ್ಷ ರೂ ಬೆಲೆಯ ಕೃಷಿ ಆಸ್ತಿಯಿದೆ. ಅಲ್ಲದೆ, ರಾಬ್ರಿಗೆ 28.5ಲಕ್ಷ ರೂ. ಬೆಲೆ ಬಾಳುವ ಕೃಷಿಯೇತರ ಭೂಮಿಯಿದೆ. ಜತೆಗೆ ಅವರ ಬಳಿ, 10 ಲಕ್ಷ ರೂ. ಮೌಲ್ಯದ 60 ದನ ಹಾಗೂ 36 ಕರುಗಳಿವೆ. ಲಾಲೂ ಬಳಿ 1990ರ ಮಾಡೆಲ್‌ನ ಮಾರುತಿ-800 ಕಾರಿದ್ದು ಅದರ ಬೆಲೆ ಸುಮಾರು 15,000 ಎಂದು ಅಂದಾಜಿಸಲಾಗಿದೆ. ಮಿಲಿಟರಿಯಿಂದ 1977ರಲ್ಲಿ ಖರೀದಿ ಮಾಡಿದ ಜೀಪು ಕೂಡಾ ಅವರ ಬಳಿಯಿದೆ. ಈ ಜೀವು ಅವರು ಮೊದಲ ಬಾರಿಗೆ ಸಂಸದ ಸ್ಥಾನಕ್ಕೆ ಸ್ಪರ್ಧಿಸಿದಾಗ ತೆಗೆದುದಾಗಿತ್ತು. ಅದರ ಬೆಲೆ ಸುಮಾರು 10,000 ರೂ. ಎಂದು ಅಂದಾಜಿಸಲಾಗಿದೆ.
ಲಾಲು ಅವರ ಬಳಿ 95,000 ರೂ. ಮೌಲ್ಯದ ಒಡವೆ ಹಾಗೂ ಹರಳುಗಳಿದ್ದು, ಅವರ ಪತ್ನಿ ರಾಬ್ರಿ ಬಳಿ 5.5 ಲಕ್ಷ ಬೆಲೆಬಾಳುವ ಆಭರಣಗಳಿವೆ. ಆದರೂ, ರಾಬ್ರಿ ಹಾಗೂ ಲಾಲು ಪ್ರಸಾದ್ ಮೇಲೆ ಆಸ್ತಿ ವಿವರವನ್ನು ತಪ್ಪಾಗಿ ನೀಡಿರುವ ಬಗ್ಗೆ ಆರೋಪವೂ ಇದೆ. ಈ ಹಿಂದೆಯೇ ಮೇವು ಹಗರಣದ ಹಿನ್ನೆಲೆಯಲ್ಲಿ ಸಿಬಿಐ ಈ ಬಿಹಾರದ ರಾಜಕಾರಣಿ ದಂಪತಿಗಳ ನ್ಯಾಷನಲ್ ಸೇವಿಂಗ್ ಸರ್ಟಿಫಿಕೆಟ್ ಜತೆಗೆ ಎರಡು ಲಕ್ಷ ರೂ. ಮೌಲ್ಯದ ಆಸ್ತಿಯ್ನನು ಮುಟ್ಟುಗೋಲು ಹಾಕಿತ್ತು.
ಲಾಲು ಅವರಂತೆಯೇ ಬಿಜೆಪಿ ವಕ್ತಾರ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಡಿ ಅವರೂ ಇಂತಹುದೇ ಆರೋಪ ಎದುರಿಸುತ್ತಿದ್ದಾರೆ. ಅವರು ಸಲ್ಲಿಸಿದ ಅಫಿಡವಿಟ್ ಪ್ರಕಾರ ಪತ್ನಿಯ ಆಸ್ತಿಯೇ ಅವರ ಆಸ್ತಿಗಿಂತ ಹೆಚ್ಚು. ರಾಜೀವ್ ಪತ್ನಿ ನೀಲಂ ಸಿಂಗ್ ಬಳಿ ವಾಹನ ಹಾಗೂ ಆಭರಣಗಳೂ ಸೇರಿ 49.71 ಲಕ್ಷ ರೂ. ಬ್ಯಾಂಕ್ ಠೇವಣಿಯಿದ್ದರೆ, ರಾಜೀವ್ ಬಳಿ 40.58 ಲಕ್ಷ ರೂ. ಇದೆ.