ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸವಾಲು ಹಾಕಿದ್ದ ಬಿಎಂಐಸಿಯ ಅಶೋಕ್ ಖೇಣಿ ಇದೀಗ ತಮ್ಮ ಕುಟುಂಬದವರ ಸಲಹೆ ಮೇರೆಗೆ ಅಖಾಡದಿಂದ ಹಿಂದೆ ಸರಿದಿರುವುದಾಗಿ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರ ಬದ್ದ ವೈರಿ ಎಂದೇ ಪರಿಗಣಿತರಾಗಿರುವ ನೈಸ್‌ನ ಅಶೋಕ್ ಖೇಣಿ ಅವರು, ತಾವು ಗೌಡರ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಬಳಿಕ ಖೇಣಿ ಅವರು ಯಾವ ಕ್ಷೇತ್ರದಿಂದಲೇ ಸ್ಪರ್ಧಿಸಲಿ ತಾವು ಕೂಡ ಅಖಾಡಕ್ಕಿಳಿಯಲು ಸಿದ್ದ ಎಂದು ದೇವೇಗೌಡರು ಸವಾಲು ಹಾಕಿದ್ದರು. ಆದರೆ ಇದೀಗ ಖೇಣಿ ತಮ್ಮ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಕಾದು ನೋಡುವ ತಂತ್ರ: ಕಾಂಗ್ರೆಸ್ ಪಕ್ಷದ ಮೇಲೆ ಮುನಿಸಿಕೊಂಡಿರುವ ಸಂಸದ ಅಂಬರೀಷ್ ಅವರು ಪಕ್ಷ ಬದಲಾವಣೆ ಕುರಿತು ಶೀಘ್ರವೇ ನಿರ್ಧರಿಸಲಾಗುವುದು ಎಂಬ ಗಡುವು ಮುಗಿದಿದ್ದು, ಮುಂದಿನ ನಿರ್ಧಾರಕ್ಕಾಗಿ ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಅವರು ಈವರೆಗೂ ಮೌನ ಮುರಿದಿಲ್ಲ. ಕಾಂಗ್ರೆಸ್ ಅಂತಿಮವಾಗಿ 22 ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಆರು ಅಭ್ಯರ್ಥಿಗಳ ಘೋಷಣೆ ಬಾಕಿ ಉಳಿಸಿಕೊಂಡಿದೆ.
ಅದೇ ರೀತಿ ಜೆಡಿಎಸ್ 18ಲೋಕಸಭಾ ಅಭ್ಯರ್ಥಿಗಳನ್ನು ಘೋಷಿಸಿ, 10ಮಂದಿ ಅಭ್ಯರ್ಥಿಗಳ ಘೋಷಣೆ ಬಾಕಿ ಇದೆ, ಬಿಜೆಪಿ ಕೂಡ 4 ಅಭ್ಯರ್ಥಿಗಳ ಘೋಷಣೆಗಾಗಿ ಕಾದು ನೋಡುವ ತಂತ್ರ ಅನುಸರಿಸುತ್ತಿವೆ.
ಕಾಂಗ್ರೆಸ್‌ನಲ್ಲಿ ಈಗಾಗಲೇ ಅಸಮಾಧಾನ ಭುಗಿಲೆದ್ದಿದೆ, ಸೋಮವಾರ ಸಂಜೆಯೊಳಗೆ ಆರು ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಅದಕ್ಕಾಗಿ ಅಂಬರೀಷ್ ಅವರು ಕಾಯುತ್ತಿದ್ದಾರೆ.
ಭಾರತೀಯ ಜನತಾ ಪಕ್ಷ 28ಕ್ಷೇತ್ರಗಳಲ್ಲಿ 24 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಬೆಂಗಳೂರು ದಕ್ಷಿಣದಿಂದ ಕೆಸಿ ಜನಾರ್ದನ್, ಏರ್ ಡೆಕ್ಕನ್ ಸಂಸ್ಥಾಪಕ ಕ್ಯಾ.ಗೋಪಿನಾಥ್ ಕೂಡ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಗುಲ್ಬರ್ಗಾ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಸಿಎಲ್‌ಪಿ ಮುಖಂಡರನ್ನಾಗಿ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೇಮಕ ಮಾಡುವುದು ಬಹುತೇಕ ಖಚಿತವಾಗಿದೆ.