ಬಂಗಾರಪ್ಪಗೆ ತಾಕತ್ತಿದ್ದರೆ ಕ್ಷೇತ್ರಕ್ಕೆ ಕಾಲಿಡಬಾರದು: ಸಿಎಂ
ಬೆಂಗಳೂರು, ಸೋಮವಾರ, 30 ಮಾರ್ಚ್ 2009( 17:00 IST )
ತಾವು ಹಾಗೂ ತಮ್ಮ ಪುತ್ರ ರಾಘವೇಂದ್ರ ಶಿವಮೊಗ್ಗಕ್ಕೆ ಪ್ರಚಾರಕ್ಕೆ ಬರುವುದಿಲ್ಲ. ಇದೇ ರೀತಿ ಬಂಗಾರಪ್ಪ ಮತ್ತು ಅವರ ಪುತ್ರರು ಕೂಡಾ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡದೇ ದೂರ ಉಳಿಯಬೇಕು. ಈ ರೀತಿಯ ಮಾದರಿ ಚುನಾವಣೆಗೆ ನಾವು ಸಿದ್ಧವಿದ್ದು, ಬಂಗಾರಪ್ಪನವರಿಗೆ ಒಪ್ಪಿಗೆಯಾದರೆ ಜಂಟಿಸುದ್ದಿಗೋಷ್ಠಿಯಲ್ಲಿ ಪ್ರಕಟಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸವಾಲೆಸೆದಿದ್ದಾರೆ.
ಈ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಬಂಗಾರಪ್ಪ ಮತ್ತು ರಾಘವೇಂದ್ರ ಇಬ್ಬರೂ ಈಗಾಗಲೇ ಇಡೀ ಕ್ಷೇತ್ರಕ್ಕೆ ಪರಿಚಿತರು. ಹೀಗಾಗಿ ಚುನಾವಣಾ ಪ್ರಚಾರದಿಂದ ದೂರ ಉಳಿದರೆ ಸಮಸ್ಯೆ ಏನಿಲ್ಲ. ಬದಲಾಗಿ ಬಂಗಾರಪ್ಪ ಮತ್ತು ನಾನು ಇಬ್ಬರೂ ಇತರ ಭಾಗಗಳಲ್ಲಿ ಪ್ರಚಾರ ಕಾರ್ಯದಲ್ಲಿ ನಿರತವಾಗಬಹುದು ಎಂದರು.
1983ರಲ್ಲಿ ತಾವು ಸೊರಬ ಕ್ಷೇತ್ರಕ್ಕೆ ಪ್ರಚಾರಕ್ಕೆ ಹೋಗದೆ ಗೆದ್ದಿದ್ದೇನೆ ಎಂದು ಬಂಗಾರಪ್ಪ ಹೇಳುತ್ತಿದ್ದಾರೆ. ಅವರು 1967ರಲ್ಲಿ ರಾಜಕಾರಣಕ್ಕೆ ಬಂದವರು. ರಾಘವೇಂದ್ರ ಹುಟ್ಟಿದ್ದೇ 1973ರಲ್ಲಿ. ರಾಘವೇಂದ್ರ ಸ್ಪರ್ಧಿಸಿರುವ ಈ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಪದೇ ಪದೇ ಬರುತ್ತಿದ್ದಾರೆ ಎಂದು ಇಲ್ಲ-ಸಲ್ಲದ ಆರೋಪ ಮಾಡುತ್ತಿದ್ದಾರೆ. ಇಂಥ ಆರೋಪ ಮಾಡುವ ಬದಲು ಅವರಿಗೆ ತಾಕತ್ತಿದ್ದರೆ ಕ್ಷೇತ್ರಕ್ಕೆ ಕಾಲಿಡದೆ ಚುನಾವಣೆ ನಡೆಸುವುದು ಒಳಿತು. ನಾವಂತೂ ಸಿದ್ಧ. ಈ ರೀತಿ ಮಾಡಿದರೆ ದೇಶದಲ್ಲಿಯೇ ಇದೊಂದು ಮಾದರಿ ಚುನಾವಣೆಯಾದೀತು ಎಂದರು.