ತನ್ನ ಪಕ್ಷದವರೇ ತನ್ನ ರಾಜಕೀಯ ಇಮೇಜನ್ನು ಹಾಳು ಮಾಡಲು ತನಗೆ ತೊಂದರೆ ನೀಡಿದ್ದಾರೆ ಎಂದು ಬಾಲಿವುಡ್ ನಟ, ಕಾಂಗ್ರೆಸ್ ಸಂಸದ ಗೋವಿಂದ ಆರೋಪಿಸಿದ್ದಾರೆ.
ತಮ್ಮ ನಿವಾಸದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಗೋವಿಂದ, ಪಕ್ಷದ ಕೆಲವರು ನನ್ನೊಂದಿಗೆ ಕಲಸ ಮಾಡುವಾಗ ತೊಂದರೆ ಮಾಡಿದ್ದರು ಹಾಗೂ ನನ್ನ ಕೆಲಸಕ್ಕೆ ಅಡ್ಡಿಪಡಿಸಿದ್ದರು. ಹೀಗಾಗಿ ನಾನು ಈ ಬಾರಿ ಸ್ಪರ್ಧಿಸುವುದಕ್ಕಿಂತಲೂ ಕೇವಲ ಚುನಾವಣಾ ಪ್ರಚಾರ ಮಾಡಲು ಮಾತ್ರ ಇಚ್ಛೆ ಪಡುತ್ತೇನೆ ಎಂದು ಪಕ್ಷದ ವರಿಷ್ಠೆ ಸೋನಿಯಾ ಗಾಂಧಿಯವರಿಗೆ ತಿಳಿಸಿದ್ದೇನೆ ಎಂದರು.
ಕೆಲವರು ನನ್ನ ರಾಜಕೀಯ ಇಮೇಜನ್ನು ಘಾಸಿಗೊಳಿಸಲು ವೃಥಾ ಅಪಚಾರ ಹೊರಿಸಿದರು. ನಾನು ರೈಲ್ವೆ, ಕೊಳೆಗೇರಿ ಹಾಗೂ ನೀರು ಸರಬರಾಜು ಕುರಿತು ನನ್ನ ಕ್ಷೇತ್ರದಲ್ಲಿ ಕೆಲಸ ಮಾಡಲು ಹೊರಟರೆ ಕೆಲವರು ಸುಮ್ಮನೆ ನನ್ನ ಮೇಲೆ ಅಪವಾದ ಎಬ್ಬಿಸಿದರು. ಕಳೆದ ಐದು ವರ್ಷಗಳಲ್ಲಿ ಮಾಡಿದ ಉತ್ತಮ ಕೆಲಸಗಳನ್ನು ಯಾರೂ ಗುರುತಿಸಲಿಲ್ಲ. ಇವೆಲ್ಲ ಸೋನಿಯಾ ಗಾಂಧಿಯವರಿಗೆ ಅರಿವಿದ್ದರೂ ಅವರಿಗೆ ಇನ್ನೂ ನನ್ನ ಮೇಲೆ ನಂಬಿಕೆಯಿದೆ ಎಂದರು.
ಸಮಾಜವಾದಿ ಪಕ್ಷದಿಂದ ಈ ಬಾರಿ ಸಂಸದ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಇನ್ನೊಬ್ಬ ಬಾಲಿವುಡ್ ನಟ ಸಂಜಯ್ ದತ್ ಪರವಾಗಿ ಪ್ರಚಾರ ಕೈಗೊಳ್ಳುತ್ತೀರಾ ಎಂದಿದ್ದಕ್ಕೆ, ಅವರು ನನ್ನನ್ನು ಪ್ರಚಾರಕ್ಕೆ ಕರೆದರೆ ಖಂಡಿತ ಪಾಲ್ಗೊಳ್ಳುತ್ತೇನೆ. ಆದರೆ ಇದರರ್ಥ ನಾನು ಕಾಂಗ್ರೆಸ್ ತೊರೆಯುತ್ತಿದ್ದೇನೆ ಎಂದಲ್ಲ ಎಂದು ಸ್ಪಷ್ಟಪಡಿಸಿದರು.
ಗೋವಿಂದ ಅವರು ಕಳೆದ 2004ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಮ್ ನಾಯಕ್ ಅವರನ್ನು ಸೋಲಿಸಿದ್ದರು. ಆದರೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕತೆಯಿಲ್ಲ ಎಂದು ಪಕ್ಷದ ಹೈಕಮಾಂಡ್‌ಗೆ ತಿಳಿಸಿದ್ದಾರೆ ಎನ್ನಲಾಗಿದೆ.