ಭವಿಷ್ಯದ ಸರ್ಕಾರದ ನಿರ್ಣಾಯಕ ಪಾತ್ರ ಮಂಗಗಳದ್ದು! ಶಿಮ್ಲಾ, ಸೋಮವಾರ, 30 ಮಾರ್ಚ್ 2009( 20:23 IST ) | |
ಕೆಲವರಿಗೆ ಹನುಮಂತ ದೇವರ ರೂಪವಾದರೆ, ಹನುಮಂತನ ರೂಪವೆಂದೇ ಹೇಳುವ ಮಂಗಗಳೇ ಹಿಮಾಚಲ ಪ್ರದೇಶದಲ್ಲಿ ರೈತರಿಗೆ ದೊಡ್ಡ ಅನಿಷ್ಟವಾಗಿ ಪರಿಣಮಿಸಿದ್ದು, ಇದು ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಮಹತ್ವದ ಪಾತ್ರ ವಹಿಸಲಿವೆ.
ವಿಷಯ ಸಿಂಪಲ್ಲಾಗಿ, ತಮಾಷೆಯಾಗಿ ಕಾಣಬಹುದು. ಆದರೆ ಹಿಮಾಚಲ ಪ್ರದೇಶದ ಜನರಿಗೆ ಮಾತ್ರ ಇದು ಭಯಂಕರ ಸಮಸ್ಯೆ. ಅಲ್ಲಿರುವ ಮಂಗಗಳ ಕಾಟವನ್ನು ತಪ್ಪಿಸಲು ಈವರೆಗೆ ಯಾವ ಸರ್ಕಾರಕ್ಕೂ ಯಾಕೆ ಸಾಧ್ಯವಾಗಿಲ್ಲ ಎನ್ನುವುದೇ ಈಗ ಅಲ್ಲಿನ ಮತದಾರರ ಪ್ರಶ್ನೆ.
ಪ್ರತಿ ಚುನಾವಣೆಯಲ್ಲೂ ಒಂದು ಆಶಾವಾದದಿಂದ ಮತದಾನ ಮಾಡಿದರೆ ಫಲಿತಾಂಶ ಶೂನ್ಯ. ಈಗಲೂ ಮಕ್ಕಳು, ಮಹಿಳೆಯರು ತಮ್ಮ ಜಮೀನಿನ ಬೆಳೆಗಳನ್ನು ರಕ್ಷಿಸಲು ಬೆಳಗ್ಗಿನಿಂದ ರಾತ್ರಿಯವರೆಗೆ ಕೋಲು ಹಿಡಿದು ನಿಲ್ಲಬೇಕಾಗುತ್ತದೆ. ಇಲ್ಲವಾದರೆ ಬೆಳೆ ಪೂರ್ತಿ ನಾಶವಾದಂತೆಯೇ ಸರಿ. ಆದರೆ ಪ್ರತಿ ಚುನಾವಣೆಯಲ್ಲೂ ಈ ಮಂಗಗಳನ್ನು ಹತೋಟಿಗೆ ತರುವ ಭರವಸೆ ನೀಡುವ ಜನಪ್ರತಿನಿಧಿಗಳು ಅಧಿಕಾರ ಸಿಕ್ಕ ತಕ್ಷಣ ಮರೆಯುತ್ತಾರೆ ಎಂಬುದು ಶಿಮ್ಲಾದ ರೈತ ತುಲಾರಾಮ್ ನೇಗಿಯ ಅಳಲು.
ಇನ್ನೊಬ್ಬ ರೈತ ನಾಯಿಬ್ ಸಿಂಗ್ ಠಾಕುರ್ ಹೇಳುವಂತೆ, ಬಿಜೆಪಿ ಅಧಿಕಾರಕ್ಕೆ ಬಂದಾಗ ನಾವು ತುಂಬ ಖುಷಿಯಾಗಿದ್ದೆವು. ಈ ಬಾರಿಯಾದರೂ ಮಂಗಗಳ ಹತೋಟಿ ಸಾಧ್ಯವಾಗುತ್ತದೆ ಅಂತ. ಆದರೆ, ಅವರಿಂದಲೂ ಮಂಗಗಳ ಹತೋಟಿ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಶಿಮ್ಲಾ, ಸೋಲನ್, ಸಿರ್‌ಮೌರ್, ಬಿಲಾಸ್‌ಪುರ್, ಹಮೀರ್‌ಪುರ್, ಉನಾ, ಮಂಡಿ, ಕಾಂಗ್ರಾ ಮತ್ತಿತರ ಜಿಲ್ಲೆಗಳ ರೈತರು ಮಂಗಗಳ ತೊಂದರೆಯಿಂದ ಕಷ್ಟಪಡುತ್ತಿದ್ದಾರೆ. ಅರಣ್ಯ ಇಲಾಖೆಯದ ದಾಖಲೆಗಳ ಪ್ರಕಾರ, ಒಂಬತ್ತು ಲಕ್ಷಕ್ಕೂ ಹೆಚ್ಚು ರೈತರು ಕಾಡು ಪ್ರಾಣಿಗಳಿಂದ ತೊಂದರೆಗೊಳಗಾಗಿದ್ದಾರೆ.ಸುಮಾರು 3 ಲಕ್ಷಕ್ಕೂ ಹೆಚ್ಚು ಮಂಗಗಳು ರೈತರಿಗೆ ತೊಂದರೆ ಕೊಡುತ್ತಿವೆ.
ಹಿಮಾಚಲ ಪ್ರದೇಶದಲ್ಲಿ ಮಂಗಗಳ ಉಪಟಳವೇ ಒಂದು ಸೂಕ್ಷ್ಮ ವಿಷಯವಾಗಿ ಪರಿಣಮಿಸಿದೆಯೆಂಬುದನ್ನು ರಾಜಕಾರಣಿಗಳೂ ಒಪ್ಪುತ್ತಾರೆ. ಬಿಜೆಪಿ ಮುಖಂಡ ಹಾಗೂ ಹಿಮಾಚಲ ಪ್ರದೇಶದ ಅರಣ್ಯ ಸಚಿವ ಜೆ.ಪಿ.ನಡ್ಡಾ ಹೇಳುವಂತೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ರೈತರಿಗೆ ಮಂಗಗಳನ್ನು ಹತೋಟಿಗೆ ತರುವ ಭರವಸೆ ನೀಡಿದ್ದೆವು. ಮಂಗಗಳ ಕಾಟವನ್ನು ವೈಜ್ಞಾನಿಕವಾಗಿ ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಸಾಮೂಹಿಕವಾಗಿ ಮಂಗಗಳನ್ನು ಕೊಲ್ಲುವುದು ಜನರ ಧಾರ್ಮಿಕ ಮನೋಭಾವಕ್ಕೆ ಅಡ್ಡಿಪಡಿಸಿದಂತಾಗುತ್ತದೆ ಎನ್ನುತ್ತಾರೆ.
ಕಾಂಗ್ರೆಸ್ ಮುಖಂಡ ಕೌಲ್ ಸಿಂಗ್ ಠಾಕುರ್ ಹೇಳುವಂತೆ, ಬಿಜೆಪಿ ಸರ್ಕಾರ ಮಂಗಗಳ ಕಾಟವ್ನನು ತಡೆಯಲು ಪ್ರಯತ್ನ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಹಿಂದೆ ಈ ನಿಟ್ಟಿನಲ್ಲಿ ಕೆಲಸ ಮಾಡಿತ್ತು ಎನ್ನುತ್ತಾರೆ. ಆದರೆ, ಕಾಂಗ್ರೆಸ್ ಸರ್ಕಾರ ಮಂಗಗಳನ್ನು ಸಾಮೂಹಿಕವಾಗಿ ಕಾಡಿಗೆ ಬಿಡುವ ಕಾರ್ಯಕ್ರಮ ಹಮ್ಮಿಕೊಂಡರೂ, ಇದು ಫಲಪ್ರದವಾಗಿರಲಿಲ್ಲ. ಹಾಗೂ ಇನ್ನೂ ಕ್ರೂರ ಮಂಗಗಳು ನಾಡಿಗೆ ಬರಲು ಆರಂಭಿಸಿದ್ದವು. ಒಟ್ಟಿನಲ್ಲಿ ಮಂಗಗಳೇ ಭವಿಷ್ಯದ ಸರ್ಕಾರವನ್ನು ನಿರ್ಧರಿಸಲಿವೆ.